ನ್ಯೂಸ್

ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

ಕೊಡಗು: ಮನೆಯೊಂದರಲ್ಲಿ 'ಪ್ರಾರ್ಥನಾಲಯ' ಮಾಡಿಕೊಂಡು ಅಮಾಯಕ ಬಡಜನರಿಗೆ ಆಮಿಷ ತೋರಿಸಿ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಯುತ್ತಿದ್ದುದನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಈ ಪ್ರಸಂಗ ಬೆಳಕಿಗೆ ಬಂದಿದೆ.

ಶನಿವಾರಸಂತೆಯ ಮನೆಯೊಂದರಲ್ಲಿ ಕುರುಬರ ಹಾಡಿಯ ಜನರನ್ನು ಕಲೆ ಹಾಕಿ ಮನೆಯ ಬಾಗಿಲು ಮುಚ್ಚಿ ಗೌಪ್ಯವಾಗಿ ಧರ್ಮ ಬೋಧೆ ಮಾಡುತ್ತಾ, ಮತಾಂತರದ ಯತ್ನ ನಡೆಯುತ್ತಿತ್ತು. ಆ ವೇಳೆ ಸ್ಥಳಕ್ಕೆ ದಾಳಿ ‌ನಡೆಸಿ ವಿಡಿಯೋ ಮಾಡಿಕೊಂಡಿರುವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಮತಾಂತರ ನಡೆಸುತ್ತಿದ್ದ ವ್ಯಕ್ತಿಯನ್ನು ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದು, ಮತಾಂತರಕ್ಕೆ ಬಳಸುತ್ತಿದ್ದ ಪುಸ್ತಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.