

ತಿರುವನಂತಪುರಂ: ಕೇರಳದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿ ಜವರಾಯನ ಅಟ್ಟಹಾಸ ಮೆರೆದಿದೆ. ಅಕಾಲಿಕವಾಗಿ ಸಾವು ಕಣ್ಮುಂದೆ ಬಂದ ಸಂತ್ರಸ್ತ ಜನರ ಸ್ಥಿತಿಯನ್ನು ಊಹಿಸಿಕೊಂಡರೇ ಭಯವಾಗುತ್ತದೆ. ಈ ಪ್ರದೇಶಗಳಲ್ಲಿ ಬದುಕುಳಿದವರ ಶೋಧ ಕಾರ್ಯ ನಡೆಸುತ್ತಿರುವ ರಕ್ಷಣಾ ತಂಡಗಳಿಗೆ ಹಲವು ಮನ ಕಲಕುವ ಅನುಭವಗಳಾಗಿವೆ.
ಕೇರಳದ ಇದುಕ್ಕಿ ಜಿಲ್ಲೆಯ ಕೊಕ್ಕಯಾರ್ ಗ್ರಾಮದಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು, ಕೆಸರು ತುಂಬಿದ ಕಟ್ಟಡದ ಅವಶೇಷಗಳನ್ನು ಕೆದಕಿದಾಗ, ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಾವಪ್ಪಿದ್ದ ತಾಯಿ-ಮಗನ ಶರೀರಗಳು ಸಿಕ್ಕಿವೆ. ಮೃತರನ್ನು 28 ವರ್ಷದ ಫೌಜಿಯಾ ಮತ್ತು 10 ವರ್ಷದ ಅಮೀನ್ ಎಂದು ಗುರುತಿಸಲಾಗಿದೆ. ಸನಿಹದಲ್ಲೇ ಪರಸ್ಪರ ತಬ್ಬಿಕೊಂಡು ಸಾವನ್ನು ಎದುರಿಸಿದ್ದ ಇನ್ನೂ ಮೂವರು ಮಕ್ಕಳ ಮೃತದೇಹಗಳು ಲಭಿಸಿವೆ. ಈ ಮಕ್ಕಳನ್ನು 7 ವರ್ಷದ ಆಮ್ನಾ, 8 ವರ್ಷದ ಅಫ್ಸಾನ್ ಮತ್ತು 4 ವರ್ಷದ ಅಹಿಯಾನ್ ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಫೌಜಿಯಾ ಕಂಜಿರಾಪಲ್ಲಿ ಗ್ರಾಮದ ಸಿಯಾದ್ ಎಂಬುವರ ಪತ್ನಿ ಎನ್ನಲಾಗಿದೆ. ವಿವಾಹ ಸಮಾರಂಭವೊಂದಕ್ಕಾಗಿ ಕೊಕ್ಕಯಾರ್ನ ತವರು ಮನೆಗೆ ಫೌಜಿಯಾ ತನ್ನ ಮಕ್ಕಳಾದ ಅಮೀನ್ ಮತ್ತು ಆಮ್ನಾರನ್ನು ಕರೆದುಕೊಂಡು ಬಂದಿದ್ದರು. ಮೃತ ಅಫ್ಸಾನ್ ಮತ್ತು ಅಹಿಯಾನ್ ಫೌಜಿಯಾ ಸೋದರ ಫೈಜಲ್ರ ಮಕ್ಕಳಾಗಿದ್ದರು ಎನ್ನಲಾಗಿದೆ.
ಅದೇ ಗ್ರಾಮದಲ್ಲಿ ಮತ್ತೊಂದೆಡೆ, ತೊಟ್ಟಿಲಿನಲ್ಲಿದ್ದ ಮಗುವಿನ ಶವ ಕೂಡ ಸಿಕ್ಕಿದೆ. ಮಳೆಯ ಅನಾಹುತದ ನಂತರ ಈ ಪ್ರಾಂತ್ಯದಲ್ಲಿ 11 ಜನರು ಕಾಣೆಯಾಗಿದ್ದಾರೆಂದು ವರದಿಯಾಗಿತ್ತು. ಭಾನುವಾರ ಸಂಜೆಯ ವೇಳೆಗೆ 55 ವರ್ಷ ವಯಸ್ಸಿನ ಶಾಜಿ ಎಂಬುವರ ಮೃತದೇಹ ಸೇರಿದಂತೆ 6 ಮೃತದೇಹಗಳು ಸಿಕ್ಕವು. ಇವರೆಲ್ಲರ ಶವಗಳನ್ನು ಕೊಟ್ಟಾಯಂನ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)