ಬೆಂಗಳೂರು: ಖ್ಯಾತ ಶಿಕ್ಷಣ ತಜ್ಞ, ಪಿಇಎಸ್ ಕಾಲೇಜು ಸಂಸ್ಥಾಪಕರು, ಕುಲಪತಿಗಳಾದ ಎಂ.ಆರ್. ದೊರೆಸ್ವಾಮಿ (89) ಅವರು ಗುರುವಾರ (ಮಾರ್ಚ್ 06) ನಿಧನರಾಗಿದ್ದಾರೆ.
ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಸಂಜೆ ಬನಶಂಕರಿ ಎರಡನೇ ಹಂತದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ (ಮಾರ್ಚ್ 07) ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರೊ. ಎಮ್.ಆರ್. ದೊರೆಸ್ವಾಮಿ, ಶಿಕ್ಷಣ ತಜ್ಞರು ಹಾಗೂ ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಇವರು ದಿನಾಂಕ:06.03.2025 ರಂದು ನಿಧನರಾಗಿರುತ್ತಾರೆ. ಸದರಿಯವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶಿಸಿದೆ.