ನ್ಯೂಸ್

ವೀವ್ಸ್​, ಫಾಲೋವರ್ಸ್​ ಹೆಚ್ಚಿಕೊಳ್ಳಲು ಪ್ರಯಾಣಿಕನನ್ನು ಥಳಿಸಿದ ಯೂಟ್ಯೂಬರ್; ಪೊಲೀಸರ ಕ್ರಮದ ವಿಡಿಯೋ ವೈರಲ್

ಪಟ್ನಾ: ಸ್ಮಾರ್ಟ್​ಫೋನ್​ ಯುಗದಲ್ಲಿ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಗೀಳಿಗೆ ಹೆಚ್ಚು ಬಲಿಯಾಗುತ್ತಿದ್ದು, ವೈರಲ್​ ಹಾಗೂ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಒಂದಿಲ್ಲೊಂದು ಹುಚ್ಚು ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ಯೂಟ್ಯೂಬರ್ (Youtuber) ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಲು ಹೋಗಿ ಪೊಲೀಸರ ಅತಿಥಿಯಾಗಿದ್ದು, ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿಹಾರದ ಅನುಗ್ರಹ ನಾರಾಯಣ ರಸ್ತೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಯೂಟ್ಯೂಬರ್ (Youtuber) ಒಬ್ಬನು ತನ್ನ ಪೇಜ್​ನ ವೀವ್ಸ್ ಹಾಗೂ ಫಾಲೋವರ್ಸ್​ಅನ್ನು ಹೆಚ್ಚಿಸಿಕೊಳ್ಳಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಈ ವಿಡಿಯೋವನ್ನು ತನ್ನ ಖಾತೆಯಲ್ಲಿ ಅಪ್ಲೋಡ್​ ಮಾಡುತ್ತಿದ್ದಂತೆ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಫ್ಲಾಟ್​ಫಾರ್ಮ್ ಪಕ್ಕ ನಿಧಾನವಾಗಿ ಚಲಿಸುತ್ತಿರುವ ರೈಲಿನ ಬಳಿ ಹೋಗುವ ಯುವಕ ರಿತೇಶ್​ ಕುಮಾರ್​ ಕಿಟಕಿ ಬಳಿ ಕುಳಿತಿರುವ ಪ್ರಯಾಣಿಕರೊಬ್ಬರಿಗೆ ಕಪಾಳಕ್ಕೆ ಹೊಡೆದು ಬಳಿಕ ಅವರ ವಾರ್ನಿಂಗ್ ಕೊಡುವ ರೀತಿಯಲ್ಲಿ ಪೋಸ್​ ಕೊಟ್ಟು ಏನು ಆಗಿಲ್ಲವೆಂಬಂತೆ ನಡೆದುಕೊಂಡು ಹೋಗಿದ್ದಾನೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡ ರೈಲ್ವೆ ಪೊಲೀಸರು ರಿತೇಶ್​ ಕುಮಾರ್​ನನ್ನು ಬಂಧಿಸಿದ್ದು, ಬಳಿಕ ಆತ ಕ್ಷಮೆಯಾಚಿಸುತ್ತಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ವೃತ್ತಿಯಲ್ಲಿ ನಾನೊಬ್ಬ ಯೂಟ್ಯಬರ್ ಆಗಿದ್ದು, ಇನ್ಸ್​ಟಾಗ್ರಾಮ್​ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತೇನೆ. ಈಚೆಗೆ ನಾನು ನಾರಾಯಣ ಅನುಗ್ರಹ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾಗ ಅಲ್ಲಿ ಪ್ರಯಾಣಿಕರೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದೆ. ಇದು ನನ್ನ ಕಡೆಯಿಂದ ಆಗಿರುವ ತಪ್ಪು ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪೊಲೀಸರು ರಿಲೀಸ್​ ಮಾಡಿರುವ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ.