ನ್ಯೂಸ್

6 ಲಕ್ಷ ಕೋಟಿ ರೂ. ಬಂಡವಾಳಕ್ಕೆ ಖಾಸಗಿಗೆ ಕೆಂಪುಹಾಸು; ಬಂಡವಾಳ ಕ್ರೋಡೀಕರಣ ಯೋಜನೆಗೆ ಚಾಲನೆ

ನವದೆಹಲಿ: ಕರೊನಾ ಮಹಾಮಾರಿ ತಂದೊಡ್ಡಿರುವ ಆರ್ಥಿಕ ಸಂಕಷ್ಟದ ನಡುವೆಯೇ ಈ ಸಾಲಿನ ಬಜೆಟ್​ನಲ್ಲಿ ಘೋಷಿಸಿದಂತೆ, ಬಂಡವಾಳ ಕ್ರೋಡೀಕರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮೂಲಸೌಕರ್ಯ ಸಹಿತ ಹಲವು ಆಸ್ತಿಗಳನ್ನು ಪರಭಾರೆ ಅಥವಾ ಗುತ್ತಿಗೆಗೆ ನೀಡುವ ರಾಷ್ಟ್ರೀಯ ಮಾನಿಟೈಸೇಷನ್ ಪೈಪ್​ಲೈನ್ (ಎನ್​ಎಂಪಿ) ಯೋಜನೆಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ. ಹೆದ್ದಾರಿ, ರೈಲ್ವೆ, ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಜಾಲ, ನೈಸರ್ಗಿಕ ಅನಿಲದ ಕೊಳವೆ ಮಾರ್ಗ, ಬಂದರು ವಲಯಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಇದಲ್ಲದೆ 15 ರೈಲ್ವೆ ಸ್ಟೇಡಿಯಂ, 25 ವಿಮಾನ ನಿಲ್ದಾಣ, 160 ಕಲ್ಲಿದ್ದಲು ಗಣಿಗಳನ್ನು ಖಾಸಗಿಗೆ ವಹಿಸಲಾಗುತ್ತದೆ. ಈ ಯೋಜನೆಯ ಮೂಲಕ ಸರ್ಕಾರಿ ಸ್ವತ್ತುಗಳ ಪರಭಾರೆಗೆ ಮಧ್ಯಮ ಪ್ರಮಾಣದ ನೀಲಿನಕ್ಷೆಯನ್ನು ಸರ್ಕಾರ ರೂಪಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆಗೆ ಚಾಲನೆ ನೀಡಿದರು.

ಮುಂದಿನ ನಾಲ್ಕು ವರ್ಷಗಳಲ್ಲಿ (2022-25) 6 ಲಕ್ಷ ಕೋಟಿ ರೂಪಾಯಿ ಕ್ರೋಡೀಕರಣದ ಗುರಿ ಹೊಂದಲಾಗಿದೆ. ಇದಕ್ಕಾಗಿ ‘ಬ್ರೌನ್ ಫೀಲ್ಡ್’ ಆಸ್ತಿಗಳನ್ನು (ಈಗಾಗಲೇ ಹೂಡಿಕೆ ಮಾಡಿ ಪೂರ್ಣಪ್ರಮಾಣದಲ್ಲಿ ಬಳಕೆಯಾಗದ ಆಸ್ತಿ) ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನಿರ್ದಿಷ್ಟ ಅವಧಿಗೆ ವಹಿಸಿಕೊಡಲು ಮಾತುಕತೆ ನಡೆದಿದೆ. ಕೆಲವು ಈಗಾಗಲೇ ಚಾಲ್ತಿಯಲ್ಲಿ ಇವೆ ಎಂದರು. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಎನ್​ಎಂಪಿ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಕಳೆದ ಫೆ.1ರಂದು ಮಂಡಿಸಿದ ಬಜೆಟ್​ನಲ್ಲಿ ಘೋಷಿಸಿದ್ದರು. ಆದಾಯ ಆಕರಕ್ಕೆ ಹೊಸ ಹೊಸ ಮೂಲಗಳನ್ನು ಸರ್ಕಾರ ಹುಡುಕುತ್ತಿದೆ; ಇದರಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್​ಗಳು, ವಿಮಾ ವಲಯದ ಸಂಸ್ಥೆಗಳು ಸೇರಿವೆ ಎಂದು ಹೇಳಿದ್ದರು.

ವಿಪಕ್ಷಗಳ ಆರೋಪ

  • ಈ ಪರಭಾರೆಯಿಂದ ಸಂಸ್ಥೆ, ಮೂಲಸೌಕರ್ಯ, ಆಸ್ತಿಗಳ ಮೇಲೆ ಸರ್ಕಾರದ ಹಿಡಿತ ತಪು್ಪತ್ತದೆ.
  • ಖಾಸಗಿಯವರ ಆಡುಂಬೊಲಕ್ಕೆ ಆಸ್ಪದ. ಅವರು ಹೇಳಿದ್ದೇ ನಿಯಮ. ವಿಧಿಸಿದ್ದೇ ಶುಲ್ಕ. ಗೂಂಡಾರಾಜ್ ಪರಿಸ್ಥಿತಿ ಉದ್ಭವಿಸಲು ಅವಕಾಶ.
  • ದೀರ್ಘಾವಧಿ ಗುತ್ತಿಗೆಯಿಂದ ಆಸ್ತಿಗಳು ಮತ್ತೆ ಸರ್ಕಾರದ ವಶಕ್ಕೆ ಮರಳುವುದು ಅನುಮಾನ.

ಸರ್ಕಾರದ ಸಮರ್ಥನೆ

  • ಮಾನಿಟೈಸೇಷನ್​ನಿಂದ ಹೆಚ್ಚಿನ ಮೌಲ್ಯ ಸೃಷ್ಟಿಯಾಗುತ್ತದೆ ಮತ್ತು ಸಂಪನ್ಮೂಲಗಳು ಆರ್ಥಿಕತೆಗೆ ವೇಗ ನೀಡುತ್ತದೆ
  • ಗುತ್ತಿಗೆ ಅಥವಾ ಪರಭಾರೆ ಕೆಲವು ವರ್ಷಕ್ಕಷ್ಟೆ ಸೀಮಿತ. ಹೀಗಾಗಿ ಆಸ್ತಿಗಳ ಮೂಲ ಮಾಲೀಕತ್ವ ಸರ್ಕಾರದ ಬಳಿಯಲ್ಲೇ ಇರಲಿದೆ
  • ಬೇಕಾಬಿಟ್ಟಿಯಾಗಿ ನೀತಿ, ಶುಲ್ಕ ವಿಧಿಸಲು ಅವಕಾಶ ಇಲ್ಲ. ಎಲ್ಲದಕ್ಕೂ ಮಾರ್ಗಸೂಚಿ ಇರುತ್ತದೆ. ಅದರಡಿಯಲ್ಲೇ ಕಾರ್ಯ ನಿರ್ವಹಿಸಬೇಕು. ಸರ್ಕಾರ ಪ್ರತಿಯೊಂದರ ಮೇಲೂ ನಿಗಾ ಇರಿಸಲಿದೆ.
  • ಗುತ್ತಿಗೆ ಅವಧಿಯ ಕರಾರು ಇದ್ದು, ಎಲ್ಲದಕ್ಕೂ ಒಪಂದದ ಚೌಕಟ್ಟು ಇರುತ್ತದೆ. ಯಾವುದೇ ಆಸ್ತಿ ಕೈತಪು್ಪವುದಿಲ್ಲ.
  • ಹೆದ್ದಾರಿ ವಲಯದಲ್ಲಿ 26,700 ಕಿ.ಮೀ. ರಸ್ತೆ ನಿರ್ಮಾಣ ಗುರಿ ಇದೆ. ಈಗಾಗಲೇ 1,700 ಕೋಟಿ ರೂ. ಮೌಲ್ಯದ 1,400 ಕಿ.ಮೀ. ರಸ್ತೆ ನಿರ್ಮಾಣ ಆಗಿದೆ.
  • ವಿದ್ಯುತ್ ಗ್ರಿಡ್ ಮೂಲಕ ವಿದ್ಯುತ್ ಸರಬರಾಜು ಮಾರ್ಗದ ಐದು ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದ್ದು, 7,700 ಕೋಟಿ ರೂ. ಬಂಡವಾಳ ಹೂಡಿಕೆ ಆಗಿದೆ.
  • ಎನ್​ಟಿಪಿಸಿ, ಎನ್​ಎಚ್​ಪಿಸಿ, ಎನ್​ಎಲ್​ಸಿಗಳ ಮೂಲಕ 39,832 ಕೋಟಿ ರೂಪಾಯಿ ಮೌಲ್ಯದ ಜಲ ಮತ್ತು ಸೌರ ವಿದ್ಯುತ್ ಉತ್ಪಾದನೆಯ ಗುರಿ ಇದೆ.
ಮೂಲಸೌಕರ್ಯ ವಲಯವು ಸರ್ಕಾರಕ್ಕೆ ಆದಾಯ ತಂದುಕೊಡುವ ದೊಡ್ಡ ಮೂಲ. ಬಹು ಆಯಾಮದಲ್ಲಿ ಇದು ಕಾರ್ಯನಿರ್ವಹಿಸಲಿದೆ ಮತ್ತು ಮುಂದಿನ ಹಂತಕ್ಕೆ ಖಾಸಗಿ ಬಂಡವಾಳವನ್ನೂ ಆಕರ್ಷಿಸುತ್ತದೆ

| ರಾಜೀವ್ ಕುಮಾರ್ ನೀತಿ ಆಯೋಗದ ಉಪಾಧ್ಯಕ್ಷ

ಎನ್​ಎಂಪಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸರ್ಕಾರ ಪೂರ್ಣವಾಗಿ ಬದ್ಧವಾಗಿದೆ. ಖಾಸಗಿ ವಲಯಕ್ಕೆ ಸ್ವತ್ತುಗಳನ್ನು ವಹಿಸಿಕೊಡುವುದರಿಂದ ಅವುಗಳ ಕಾರ್ಯವಿಧಾನ ಮತ್ತು ನಿರ್ವಹಣೆ ಉತ್ತಮ ಆಗಲಿದೆ. ಇದರಿಂದ ಬರುವ ಆದಾಯದಿಂದ ಹೊಸ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ

| ಅಮಿತಾಭ್ ಕಾಂತ್ ನೀತಿ ಆಯೋಗದ ಸಿಇಒ

ಯಾವ ಸಚಿವಾಲಯಗಳು ಭಾಗಿ: ರಸ್ತೆ, ಸಾರಿಗೆ ಮತ್ತು ಹೆದ್ದಾರಿ, ವಿದ್ಯುತ್, ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಶಿಪ್ಪಿಂಗ್, ಬಂದರು ಮತ್ತು ಜಲಸಾರಿಗೆ, ದೂರಸಂಪರ್ಕ, ಆಹಾರ ಮತ್ತು ನಾಗರಿಕ ಪೂರೈಕೆ, ಗಣಿ, ಕಲ್ಲಿದ್ದಲು, ವಸತಿ, ನಗರಾಭಿವೃದ್ಧಿ, ಹಣಕಾಸು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ.

ಸರ್ಕಾರ ಯಾವುದೇ ಸ್ವತ್ತನ್ನು ಮಾರಾಟ ಮಾಡುತ್ತಿಲ್ಲ. ಸಮರ್ಪಕವಾಗಿ ಬಳಕೆಯಾಗದ ಆಸ್ತಿಗಳನ್ನು ಖಾಸಗಿ ವಲಯಕ್ಕೆ ವಹಿಸಿಕೊಡುತ್ತಿದೆ. ನಿರ್ದಿಷ್ಟ ಅವಧಿಯ ಗುತ್ತಿಗೆ ಮುಗಿದ ನಂತರ ಅವುಗಳು ಸರ್ಕಾರಕ್ಕೆ ವಾಪಸಗಾಲಿವೆ. ಮೂಲ ಮಾಲೀಕತ್ವ ಸರ್ಕಾರದ ಬಳಿಯಲ್ಲೇ ಇರಲಿದೆ. ಖಾಸಗಿ ಸಹಭಾಗಿತ್ವದಿಂದ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣ ಆಗುತ್ತದೆ. ಇದನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ.

| ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ

ಹೀಗಿರಲಿದೆ ಆಸ್ತಿಯ ಗುತ್ತಿಗೆ ವಿಧಾನ

  • ಬಹುತೇಕವಾಗಿ ಸಂಪನ್ಮೂಲ ಕ್ರೋಡೀಕರಣವು ‘ಇನ್ವ್​ಇಟ್’ (Infrastructure Investment Trust) ಅಥವಾ ಸಾರ್ವಜನಿಕ-ಖಾಸಗಿ- ಪಾಲುದಾರಿಕೆ (ಪಿಪಿಪಿ) ದರಿಯದ್ದಾಗಿರುತ್ತದೆ
  • ಆಸ್ತಿ ಅಥವಾ ಮೂಲಸೌಕರ್ಯಗಳ ಗುತ್ತಿಗೆಯಿಂದ ಆಕರವಾಗುವ ಆದಾಯವನ್ನು ಬೇರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ
  • ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ವಲಯ ತೊಡಗಿಕೊಳ್ಳಲು ಮತ್ತು ಖಾಸಗಿ ಬಂಡವಾಳದ ಆಕರ್ಷಣೆಗೆ ಅವಕಾಶ