ನ್ಯೂಸ್

ಚಿತ್ರಾವತಿ ನದಿಗೆ ಹಾರಿ ಮಹಿಳಾ ಟೆಕ್ಕಿ ಸಾವು ಪ್ರಕರಣ: ವಿಡಿಯೋ ಕಾಲ್​ನಿಂದ ಬಯಲಾಯ್ತು ಕಾರಣ

ಚಿಕ್ಕಬಳ್ಳಾಪುರ: ಬೆಂಗಳೂರಿನ ಮಹಿಳಾ ಟೆಕ್ಕಿ ಆತ್ಮಹತ್ಯೆಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ನಿಹಾರಿಕ (22) ಮೃತ ದುರ್ದೈವಿ. ಈಕೆ ಧರ್ಮಾವಂರಂ ಸಿವಾಸಿ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಾಗಿದ್ದಳು. ಜೂ. 24ರಂದು ಬಾಗೇಪಲ್ಲಿಯ ಚಿತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಏನೆಂದು ತಿಳಿದುಬಂದಿರಲಿಲ್ಲ. ಇದೀಗ ಪ್ರೇಮ ವೈಫಲ್ಯವೇ ಕಾರಣ ಎಂದು ತಿಳಿದುಬಂದಿದೆ.

ಕೆಲಸಕ್ಕೆಂದು ಹೋದವಳು ವಾಪಸ್​ ಪಿಜಿಗೆ ಬಂದಿರಲಿಲ್ಲ. ಇದೀಗ ಆಕೆಯ ವಿಡಿಯೋ ಕಾಲ್ ಬೆಳಕಿಗೆ ಬಂದಿದೆ. ಸಾಯುವ ಮುನ್ನ ಮನೆಯವರಿಗೆ ವಿಡಿಯೋ ಕಾಲ್​ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಹಾರಿಕ ಹೇಳಿದ್ದಳು. ಬಾಗೇಪಲ್ಲಿಯಲ್ಲಿ ಬಸ್​ನಿಂದ ಇಳಿದು ಚಿತ್ರಾವತಿ ನದಿ ಕಡೆಗೆ ನಡೆದುಕೊಂಡು ಹೋಗಿ ಸಾವಿಗೆ ಶರಣಾಗಿದ್ದಳು.

ನಿಹಾರಿಕಳ ಆತ್ಮಹತ್ಯೆಗೆ ಅಜಯ್ ಎಂಬಾತನೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)