RBI : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರೀಕ್ಷೆಯಂತೆ ಶುಕ್ರವಾರ ತನ್ನ ಪ್ರಮುಖ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿಟ್ಟಿದೆ, ದೃಢವಾದ ಆರ್ಥಿಕ ಬೆಳವಣಿಗೆಯ ಮಧ್ಯೆ ಹಣದುಬ್ಬರದ ಮೇಲೆ ಗಮನ ಕೇಂದ್ರೀಕರಿಸಿದೆ.
ಮೂವರು ಆರ್‌ಬಿಐ ಮತ್ತು ಅಷ್ಟೇ ಸಂಖ್ಯೆಯ ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯು ಸತತ 11ನೇ ಬಾರಿಗೆ ರೆಪೋ ದರವನ್ನು ಶೇ. 6.50ರ ಯಥಾಸ್ಥಿತಿಯಲ್ಲಿ ಇರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಹಣದುಬ್ಬರ ಒತ್ತಡಗಳು ಮತ್ತು ಅನಿಶ್ಚಿತ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನದಿಂದ ಆರ್‌ಬಿಐ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಅಲ್ಲದೆ, ಬ್ಯಾಂಕ್‌ಗಳಿಗೆ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ. 0.5 ರಷ್ಟು ಕಡಿತಗೊಳಿಸಿದ್ದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಾಲ ನೀಡಲು ಹೆಚ್ಚಿನ ಹಣ ಲಭ್ಯವಾಗುವಂತೆ ಮಾಡಿದೆ.
ಸಿಆರ್‌ಆರ್ ಶೇ.4.5ರಿಂದ ಶೇ.4ಕ್ಕೆ ಇಳಿಕೆಯಾಗಿದೆ. ಮಾರ್ಚ್ 2020 ರಿಂದ ಸಿಆರ್‌ಆರ್ ಕಡಿತಗೊಳಿಸಿರುವುದು ಇದೇ ಮೊದಲು. ಅಂದಹಾಗೆ ಸಿಆರ್‌ಆರ್ ಎನ್ನುವುದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಐಡಲ್ ಕ್ಯಾಶ್ ಆಗಿ ಮೀಸಲಿಡಬೇಕಾದ ಠೇವಣಿಗಳ ಅನುಪಾತವಾಗಿದೆ. ಸಿಆರ್‌ಆರ್ ಕಡಿತವು ಬ್ಯಾಂಕಿಂಗ್ ವ್ಯವಸ್ಥೆಗೆ 1.16 ಲಕ್ಷ ಕೋಟಿ ರೂಪಾಯಿಗಳನ್ನು ತುಂಬುತ್ತದೆ ಮತ್ತು ಮಾರುಕಟ್ಟೆ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ.
ಇನ್ನು 2025ರ ಹಣಕಾಸು ವರ್ಷದಲ್ಲಿ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಬೆಳವಣಿಗೆ ದರವನ್ನು 7.2% ರಿಂದ 6.6% ಕ್ಕೆ ಕಡಿತಗೊಳಿಸಿದ್ದಾರೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನೈಜ ಜಿಡಿಪಿಯ ಬೆಳವಣಿಗೆಯು 5.4% ರಷ್ಟು ನಿರೀಕ್ಷಿತಕ್ಕಿಂತ ಕಡಿಮೆಯಾಗಿದೆ. ಉತ್ಪಾದನಾ ಕಂಪನಿಗಳ ನಿಧಾನಗತಿಯ ಕಾರ್ಯಕ್ಷಮತೆ, ತಗ್ಗಿದ ಗಣಿಗಾರಿಕೆ ಚಟುವಟಿಕೆ ಮತ್ತು ಕಡಿಮೆ ವಿದ್ಯುತ್ ಬೇಡಿಕೆಯಿಂದಾಗಿ ಮೊದಲ ತ್ರೈಮಾಸಿಕದಲ್ಲಿ 7.4% ರಷ್ಟಿದ್ದ ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ 2.1% ರಷ್ಟು ಕುಸಿದು 5.4% ರಷ್ಟಕ್ಕೆ ಕುಸಿದಿದೆ. (ಏಜೆನ್ಸೀಸ್)