ಚೆನ್ನೈ: ಮಾಸ್ ಮಹಾರಾಜ ಎಂದೇ ಟಾಲಿವುಡ್ ಅಂಗಳದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಸ್ಟಾರ್ ನಟ ರವಿತೇಜ ಅವರು ಸದ್ಯ ತಮ್ಮ ಪ್ಯಾನ್ ಇಂಡಿಯಾ 'ಟೈಗರ್ ನಾಗೇಶ್ವರ ರಾವ್' ಚಿತ್ರದ ಪ್ರಚಾರ ಕಾರ್ಯವನ್ನು ಬಿರುಸಿನಿಂದ ಮಾಡುವಲ್ಲಿ ನಿರತರಾಗಿದ್ದು, ಈ ಮಧ್ಯೆ ಒಂದು ಕುತೂಹಲಕಾರಿ ಸಂಗತಿಯನ್ನು ಅಪಾರ ಸಂಖ್ಯೆಯ ಅಭಿಮಾನಿಗಳ ಮುಂದೆ ಇದೀಗ ಬಹಿರಂಪಡಿಸಿದ್ದಾರೆ.
ಭಾನುವಾರ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023ರ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದಲ್ಲಿ ಸ್ಟಾರ್ ಸ್ಪೋರ್ಟ್ಸ್ ತೆಲುಗು ಕಾಮೆಂಟರಿ ಬಾಕ್ಸ್‌ಗೆ ಆಗಮಿಸಿದ್ದ ರವಿತೇಜ, ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದ ಜತೆಗೆ ತಮ್ಮ ಚಿತ್ರದ ಪ್ರಚಾರ ಕೆಲಸವನ್ನು ಕೂಡ ಮಾಡಿದರು. ಈ ವೇಳೆ ಭಾರತೀಯ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ಜೀವನಚರಿತ್ರೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಹೈದರಾಬಾದ್ ಮೂಲದ ಸಿರಾಜ್ ತಮ್ಮ ವೃತ್ತಿಜೀವನದಲ್ಲಿ ಬಹಳ ಮುಂದೆ ಬಂದಿದ್ದಾರೆ. ಆರಂಭದಲ್ಲಿ, ಬಹಳಷ್ಟು ಟೀಕೆಗಳನ್ನು ಎದುರಿಸಿದರು. ತಮ್ಮ ನ್ಯೂನತೆಗಳ ಮೇಲೆ ಕೆಲಸ ಮಾಡಿ, ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದೀಗ ರವಿತೇಜ ಬಯೋಪಿಕ್ ಮಾಡುವ ಬಗ್ಗೆ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದ್ದು, ಯಾವಾಗ ಈ ಕುರಿತಂತೆ ಅಧಿಕೃತ ಮಾಹಿತಿ ಕೊಡಲಿದ್ದಾರೆ ಎಂದು ಕುತೂಹಲದಿಂದ ಕಾಯತೊಡಗಿದ್ದಾರೆ.
2011ರ ವಿಶ್ವಕಪ್ ಪಂದ್ಯ ನೆನೆದ ರವಿತೇಜ, ಮಹೇಂದ್ರ ಸಿಂಗ್ ಧೋನಿ ಅವರು ಕಡೆಯಲ್ಲಿ ಸಿಡಿಸಿದ ಸಿಕ್ಸ್ ಎಷ್ಟು ರೋಮಾಂಚನಕಾರಿಯಾಗಿತ್ತು ಎಂದು ಹೇಳಿದರು. ವಿರಾಟ್ ಕೊಹ್ಲಿ ಸೇರಿದಂತೆ ಅನೇಕರನ್ನು ಕಾಮೆಂಟರಿ ವೇಳೆ ನೆನಪಿಸಿಕೊಂಡು ಹೊಗಳಿದರು. ನಟ ಬಯೋಪಿಕ್ ಸಿನಿಮಾ ಮಾಡಲಿದ್ದಾರಾ ಅಥವಾ ತಮ್ಮ ಅನಿಸಿಕೆಯನ್ನು ಮಾತ್ರ ಹಂಚಿಕೊಂಡರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).