ಆಹಾರ ಇಲಾಖೆಯ ಕುಟುಂಬ ತಂತ್ರಾಂಶವು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಮೊತ್ತದ ಗ್ಯಾರಂಟಿ ಯೋಜನೆಯ ಹಣ ಉಳಿಸಿದೆ. ಅನರ್ಹ ಕಾರ್ಡ್ಗಳ ರದ್ದತಿಯಿಂದ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಕಾರ್ಡ್ದಾರರಿಗೆ (Ration Card) ಪಾವತಿ ಮಾಡಬೇಕಿದ್ದ ಅಂದಾಜು 110-120 ಕೋಟಿ ರೂ. ಸರ್ಕಾರಕ್ಕೆ ಉಳಿಕೆಯಾಗಿದೆ. ಪಡಿತರ ಚೀಟಿಗಳ ರದ್ದತಿಗೆ ವೇಗ ನೀಡಿದ್ದ ಇಲಾಖೆ, ಕುಟುಂಬ ತಂತ್ರಾಂಶದಿಂದ ಒಟ್ಟು 22,62,413 ಅನರ್ಹ ಬಿಪಿಎಲ್, ಅಂತ್ಯೋದಯ ಕಾರ್ಡ್ಗಳನ್ನು ಪತ್ತೆ ಮಾಡಿದೆ.
ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು 2023ರ ಜು.10ರಿಂದ ಜಾರಿಗೆ ತರಲಾಯಿತು. ಪ್ರತಿ ತಿಂಗಳು ಡಿಬಿಟಿ ಪೋರ್ಟಲ್ ಮೂಲಕ ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ. ನಂತೆ 5 ಕೆಜಿ ಅಕ್ಕಿಗೆ 170 ರೂ., ಅಂತ್ಯೋದಯ ಕಾರ್ಡ್ನಲ್ಲಿರುವ ನಾಲ್ವರು ಸದಸ್ಯರಿದ್ದರೆ ಕುಟುಂಬವೊಂದಕ್ಕೆ 170 ರೂ., 5 ಸದಸ್ಯರಿದ್ದರೆ 510 ರೂ. ಮತ್ತು ಆರು ಸದಸ್ಯರಿದ್ದರೆ 850 ರೂ. ನೀಡಲಾಗುತ್ತಿದೆ. ಆದರೆ, 22 ಲಕ್ಷ ಕಾರ್ಡ್ಗಳ ರದ್ದತಿಯಿಂದಾಗಿ ಈ ತಿಂಗಳಿಂದ ಹಣ ಹಾಕುವುದನ್ನು ಇಲಾಖೆ ನಿಲ್ಲಿಸಿದೆ. ಆದರೆ ಇದೇ ವೇಳೆ ಪಡಿತರ ಪಡೆಯದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಪಿಂಚಣಿ, ಆರ್ಟಿಇ ಅಡಿ ಅರ್ಜಿ ಸಲ್ಲಿಸಲು ಕೆಲ ಕುಟುಂಬಗಳು ಮಾಡಿಸಿಕೊಂಡಿದ್ದ ಕಾರ್ಡ್ಗಳು ರದ್ದಾಗಲಿದ್ದು, ಸೌಲಭ್ಯ ಪಡೆಯಲು ಸಾಧ್ಯವಿಲ್ಲ.
ಆಹಾರ ಭದ್ರತೆ ಕಾಯ್ದೆಯಡಿ (ಎನ್ಎಫ್ಎಸ್ಎ) ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ರಾಜ್ಯದ ಬಿಪಿಎಲ್ ಫಲಾನು ಭವಿಗಳಿಗೆ, ಅಂತ್ಯೋದಯ ಕಾರ್ಡ್ದಾರರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಸೇರಿ ಒಟ್ಟು 5 ಕೆಜಿ ಆಹಾರ ಪದಾರ್ಥ ಹಾಗೂ ಪ್ರತಿ ಅಂತ್ಯೋದಯ ಕಾರ್ಡ್ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ಆಹಾರ ಪದಾರ್ಥವನ್ನು ಉಚಿತವಾಗಿ ನೀಡುತ್ತಿದೆ. ಅನರ್ಹ ಕಾರ್ಡ್ಗಳ ರದ್ದತಿಯಿಂದಾಗಿ ಕೇಂದ್ರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಹಣ ಉಳಿತಾಯವಾಗಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್ಗಳಿವೆ. ಹಾಗಾಗಿ, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, 7.5 ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಎಂಎನ್ಸಿ ಕಂಪನಿ, ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋರಿಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನಚಾಲಿತ ದ್ವಿಚಕ್ರ, ತ್ರಿಚಕ್ರ ಕಾರು ಹೊಂದಿರುವ ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್ ಕಾರ್ಡ್ ರದ್ದುಪಡಿಸಿದೆ.
ಕಾಲಬದಲಾದಂತೆ ಸಹಜವಾಗಿಯೇ ಕುಟುಂಬಗಳ ಆರ್ಥಿಕ ಸ್ಥಿತಿ ಬೆಳೆವಣಿಗೆಯಾಗುತ್ತಿದೆ. ರಾಜ್ಯದಲ್ಲಿ ಶೇ.80 ಮಂದಿ 100 ಸಿಸಿ ಮೇಲ್ಪಟ್ಟ ಇಂಧನಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಸೇರಿ ಇತರ ವಾಹನ ಹೊಂದಿರುವ ಕುಟುಂಬಗಳಿವೆ. ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರು, ಕಂಪನಿ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ 18-20 ಸಾವಿರ ರೂ. ವೇತನ ಸಿಗುತ್ತಿದೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಗಿನವರು. 15 ವರ್ಷದ ಹಿಂದಿನ ಜೀವನಕ್ಕೂ ಈಗಿನ ಜೀವನಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈ ಮಧ್ಯೆಯೂ ವರ್ಷದಿಂದ ವರ್ಷಕ್ಕೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ, ಬಡ ಕುಟುಂಬಗಳು, ಆರ್ಥಿಕ ನಿರ್ವಹಣೆಗೆ ಕಷ್ಟಪಡುತ್ತಿವೆ. ಪ್ರತಿ ಮನೆ ಮನೆಯಲ್ಲೂ ದ್ವಿಚಕ್ರ ವಾಹನ, ಕಾರುಗಳಿವೆ. ವರ್ಷದಿಂದ ವರ್ಷಕ್ಕೆ ಆದಾಯವೂ ವೃದ್ಧಿಯಾ ಗುತ್ತದೆ. ಹಾಗಾಗಿ, ಅವೈಜ್ಞಾನಿಕ ಬಿಪಿಎಲ್ ಮಾನದಂಡ ಪರಷ್ಕರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.