ದೆಹಲಿ: ದೇಶದ ಹಿರಿಯ ಉದ್ಯಮಿ ರತನ್ ಟಾಟಾ ಅವರನ್ನು ಪಿಎಂ ಕೇರ್ಸ್ ಫಂಡ್ನ ನೂತನ ಟ್ರಸ್ಟಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಟ್ರಸ್ಟಿಗಳಾದ ಗೃಹ ಮಂತ್ರಿ ಅಮಿತ್ ಷಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು.
ರತನ್ ಟಾಟಾ ಜತೆಗೆ, ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ ಥಾಮಸ್ ಹಾಗೂ ಲೋಕಸಭೆಯ ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ ಅವರ ಹೆಸರನ್ನು ಕೂಡ ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಯಾಗಿ ನಾಮ ನಿರ್ದೇಶನಗೊಳಿಸಿದ್ದಾರೆ.
ಪಿಎಂ ಕೇರ್ಸ್ ಫಂಡ್ನ ಹಣ ದುರುಪಯೋಗವಾಗುತ್ತಿದೆ ಎಂದು ಈ ಹಿಂದೆ ವಿರೋಧ ಪಕ್ಷಗಳು ಆರೋಪಿಸಿದ್ದವು. ಇದೀಗ ನೂತನವಾಗಿ ಆಯ್ಕೆಯಾಗಿರುವ ಟ್ರಸ್ಟಿಗಳ ಭಾಗವಹಿಸುವಿಕೆಯಿಂದ ಪಿಎಂ ಕೇರ್ಸ್ ಫಂಡ್ನ ಕಾರ್ಯನಿರ್ವಹಣೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಪಿಎಂ ಕೇರ್ಸ್ ನಿಧಿಯನ್ನು ಸಾರ್ವಜನಿಕ ಅಗತ್ಯತೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಬೇಕಾಗಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕರೊನಾ ಸಂದರ್ಭದಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪನೆ ಮಾಡಲಾಯಿತು. ಇಲ್ಲಿ ಸಂಗ್ರಹವಾಗಿರುವ ಮೊತ್ತ ಸಮಾಜದಿಂದ ಸಂಗ್ರಹವಾದ್ದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಮಾಜದ ಅಗತ್ಯತೆಗೆ ಅನುಗುಣವಾಗಿ ಈ ನಿಧಿಯನ್ನು ಬಳಕೆ ಮಾಡಲಾಗುತ್ತದೆ. (ಏಜೆನ್ಸೀಸ್)