ನವದೆಹಲಿ: ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್ ಸಿಂಗ್ (82) ಅವರು ಕರೊನಾ ಸೋಂಕಿನಿಂದ ಗುರುವಾರ ಮೃತಪಟ್ಟಿದ್ದಾರೆ.
ಅಜಿತ್ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಓರ್ವ ಸಜ್ಜನ ರಾಜಕಾರಣಿ. ಏಪ್ರಿಲ್ 20ರಂದು ಅವರಿಗೆ ಕರೊನಾ ಪಾಸಿಟಿವ್ ಆಗಿತ್ತು. ಆದರೆ, ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.
ಇಂದು ಅಜಿತ್ ಸಿಂಗ್ ಮೃತಪಟ್ಟರೆಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಬೆಳಗ್ಗೆ 8.20ರ ಸುಮಾರಿಗೆ ಕೊನೆಯುಸಿರೆಳೆದರು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯು ಮತ್ತು ವೆಂಟಿಲೇಟರ್ ಬೆಂಬಲದೊಂದಿಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅಜಿತ್ ಸಿಂಗ್ ಅವರ ಪಿಎ ಮಾಹಿತಿ ನೀಡಿದರು.
ಈ ಬಗ್ಗೆ ಮಾಜಿ ಸಂಸದ ಜಯಂತ್ ಚೌಧರಿ ಸಹ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಹೀಗೆ ಅನೇಕರು ಅಜಿತ್ ಸಿಂಗ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಂತಾಪ ಸೂಚಿಸಿದ್ದಾರೆ.
ಅಜಿತ್ ಸಿಂಗ್ ಅವರು ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮಗ. ಇವರು 8 ಬಾರಿ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ರಾಜ್ಯಸಭಾ ಸದಸ್ಯರು ಸಹ ಆಗಿದ್ದರು. ನಾಲ್ಕು ಬಾರಿ ಕೇಂದ್ರ ಸಚಿವರಾಗಿಯು ಸೇವೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)