ಆಂಧ್ರಪ್ರದೇಶ: ಟಾಲಿವುಡ್ ಹಾಗೂ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ಮಹಿಳಾ ಪ್ರಧಾನ ಕಥೆ ಆಧರಿತ ಸಿನಿಮಾದಲ್ಲಿ ನಟಿಸಲಿದ್ದು, ಈ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ವಿಡಿಯೋ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ.
ಈ ಹಿಂದಿನಿಂದಲೂ ಮಹಿಳಾ ಪ್ರಧಾನ ಪ್ರಾಜೆಕ್ಟ್ವೊಂದರಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದು ಯಾವ ಸಿನಿಮಾ, ಯಾರ ನಿರ್ದೇಶನ ಎಂಬ ಹಲವು ಸಂಗತಿಗಳು ಇಂದು ಚಿತ್ರತಂಡ ಘೋಷಿಸಿದ ಅಧಿಕೃತ ಮಾಹಿತಿ ಮೂಲಕ ಬಹಿರಂಗಗೊಂಡಿದೆ.
'ಮನ್ಮಧುಡು 2' ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ಮತ್ತೊಂದು ಸಿನಿಮಾದ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದು, 'ದಿ ಗರ್ಲ್‌ಫ್ರೆಂಡ್' ಎಂಬ ಮಹಿಳಾ ಪ್ರಧಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ಟೈಟಲ್ ಜತೆಗೆ ಗ್ಲಿಂಪ್ಸ್ ವಿಡಿಯೋ ಎರಡನ್ನೂ ಅನಾವರಣಗೊಳಿಸಿದ ನಿರ್ದೇಶಕರು, ಪ್ರೀತಿಯ ವಿಷಯವನ್ನು ವಿಶೇಷ ರೀತಿಯಲ್ಲಿ ತೋರಿಸುವ ಪ್ರಯತ್ನದಲ್ಲಿ ಹೆಜ್ಜೆಯಿಟ್ಟಿದ್ದಾರೆ ಎಂಬುದು ಫಸ್ಟ್ ಲುಕ್ ವಿಡಿಯೋ ಮುಖೇನ ತಿಳಿಯುತ್ತದೆ. ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ನೀರಿನಲ್ಲಿ ಮುಳುಗಿ, ಉಸಿರು ಬಿಗಿಹಿಡಿದುಕೊಂಡಿರುವ ಪರಿಸ್ಥಿತಿ ನೋಡಿದರೆ ಬೇರೂರಿದ ಕಥೆಯನ್ನು ಸಿನಿಮಾದ ಮುಖಾಂತರ ಹೇಳುವಂತಿದೆ.
‘ದಿ ಗರ್ಲ್‌ಫ್ರೆಂಡ್’ ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದ್ದು, ಈ ಚಿತ್ರವನ್ನು ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ನಿರ್ಮಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಲಿದ್ದಾರೆ,(ಏಜೆನ್ಸೀಸ್).