ನ್ಯೂಸ್

ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ಪ್ರಕರಣ; ವಿಚಾರಣೆ ವೇಳೆ ಹೊರಬಿತ್ತು ಸ್ಫೋಟಕ ಮಾಹಿತಿ

ನವದೆಹಲಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಂಟೂರು ಮೂಲದ ಏಮಾನಿ ನವೀನ್ (24)​ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಬಿ.ಟೆಕ್​ ವ್ಯಾಸಂಗ ಮಾಡುತ್ತಿದ್ದು, ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಮೂವರು ಪ್ರಮುಖ ನಟಿಯರ ಫ್ಯಾನ್​ ಪೇಜ್​ ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಓರ್ವ ಅಭಿಮಾನಿಯಾಗಿ ಆತನೇ ಈ ರೀತಿಯ ಕೃತ್ಯ ಎಸಗಿರುವುದು ಹಲವರಿಗೆ ಆಘಾತವನ್ನುಂಟು ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಐಎಫ್‌ಎಸ್‌ಒ ಘಟಕದ ಡಿಸಿಪಿ ಹೇಮಂತ್​ ತಿವಾರಿ, ಬಂಧಿತ ಆರೋಪಿ ಬಿ.ಟೆಕ್​ ಪದವಿ ವ್ಯಾಸಂಗ ಮಾಡುತ್ತಿದ್ದು, 2019ರಲ್ಲಿ ಈತ ಗೂಗಲ್​ ಮೂಲಕ ಡಿಜಿಟಲ್​ ಮಾರ್ಕೆಟಿಂಗ್​ ಕೋರ್ಸ್​ ಮಾಡಿಕೊಂಡಿದ್ದಾನೆ. ದಕ್ಷಿಣ ಭಾರತದ ಮೂವರು ಸೆಲೆಬ್ರಿಟಿಗಳ ಫ್ಯಾನ್ಸ್​ ಪೇಜ್​ಗಳನ್ನು ಈತ ನಡೆಸುತ್ತಿದ್ದ. ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ನಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚು ಮಾಡಲು ಈ ರೀತಿ ಡೀಪ್​ಫೇಕ್​ ವಿಡಿಯೋ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಬಳಿ ಇದ್ದ ಮೊಬೈಲ್​ಫೋನ್​, ಲ್ಯಾಪ್​ಟಾಪ್​ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಇರುವ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಆತನೇ ಡೀಪ್​ಫೇಕ್​ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿಗಳು ದೊರೆತಿವೆ. ಇನ್ನೂ ಕೆಲವರ ಹೆಸರು ಹೊರಬರುವ ಸಾಧ್ಯತೆ ಇದ್ದು ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಐಎಫ್‌ಎಸ್‌ಒ ಘಟಕದ ಡಿಸಿಪಿ ಹೇಮಂತ್​ ತಿವಾರಿ ತಿಳಿಸಿದ್ದಾರೆ.