ಸಾಂದರ್ಭಿಕ ಚಿತ್ರ 
ನ್ಯೂಸ್

ಭಾರತದಲ್ಲಿ ಕಂಡ ಅಪರೂಪದ ಹಾವು: ರಾಜಸ್ಥಾನದಲ್ಲಿ 3 ಸಿಸ್ತಾನ್ ಸ್ಯಾಂಡ್ ಬೋವಾ ಪತ್ತೆ | Sistan Sand Boa

ಭಾರತದಲ್ಲಿ ಇದೇ ಮೊದಲ ಬಾರಿಗೆ ಸಿಸ್ತಾನ್ ಸ್ಯಾಂಡ್ ಬೋವಾ ಹಾವಿನ ವೈಜ್ಞಾನಿಕ ದಾಖಲೆ ಮಾಡಲಾಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ ಈ ಜಾತಿಯ ಮೂರು ಹಾವುಗಳು ಪತ್ತೆಯಾಗಿದ್ದು, ಈ ಕುರಿತ ಸಂಶೋಧನಾ ವರದಿ ‘ಜರ್ನಲ್ ಆಫ್ ಥ್ರೆಟೆಂಡ್ ಟ್ಯಾಕ್ಸಾ’ದಲ್ಲಿ ಪ್ರಕಟವಾಗಿದೆ.

Rajasthan Snake Species: ಭಾರತದಲ್ಲಿ ಇದೇ ಮೊದಲ ಬಾರಿಗೆ ಸಿಸ್ತಾನ್ ಸ್ಯಾಂಡ್ ಬೋವಾ (Eryx sistanensis) ಹಾವಿನ ವೈಜ್ಞಾನಿಕ ದಾಖಲೆ ಮಾಡಲಾಗಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ರಾಮಗಢ್-ಶೇಖಾವತಿ ಪ್ರದೇಶದಲ್ಲಿ ಸಂಶೋಧಕರು ಈ ಅಪರೂಪದ ಜಾತಿಯ ಮೂರು ಹಾವುಗಳನ್ನು ಪತ್ತೆಹಚ್ಚಿದ್ದಾರೆ.

ಜಬಲ್‌ಪುರದ ಸಂಶೋಧಕ ವಿವೇಕ್ ಶರ್ಮಾ ಮತ್ತು ವನ್ಯಜೀವಿ ತಜ್ಞ ಧರ್ಮೇಂದ್ರ ಖಂಡಾಲ್ ಅವರು 2025ರಲ್ಲಿ ನಡೆಸಿದ ಸಮೀಕ್ಷೆ ವೇಳೆ ಈ ಹಾವುಗಳನ್ನು ಪತ್ತೆಹಚ್ಚಿದ್ದಾರೆ. ಈ ಕುರಿತ ಅವರ ಅಧ್ಯಯನ ವರದಿ ಮೇ 26ರಂದು ‘ಜರ್ನಲ್ ಆಫ್ ಥ್ರೆಟೆಂಡ್ ಟ್ಯಾಕ್ಸಾ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಮೂರು ಕಡೆಗಳಲ್ಲಿ ಪತ್ತೆ

ಮೊದಲ ಹಾವು ಆಗಸ್ಟ್ 19ರಂದು ಗೋಶಾಲೆಯೊಂದರಲ್ಲಿ ಪತ್ತೆಯಾಗಿದ್ದು, ಎರಡನೆಯದು ಸೆಪ್ಟೆಂಬರ್ 12ರಂದು ಮನೆಯ ಅಂಗಳದಲ್ಲಿ ಸಿಕ್ಕಿದೆ. ಮೂರನೇ ಹಾವು ಸೆಪ್ಟೆಂಬರ್ 21ರಂದು ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಬಳಿ ಪತ್ತೆಯಾಗಿದೆ.

ವಿಷಕಾರಿಯಲ್ಲದ ಹಾವು

ಸಿಸ್ತಾನ್ ಸ್ಯಾಂಡ್ ಬೋವಾ ವಿಷಕಾರಿಯಲ್ಲದ, ದಪ್ಪ ದೇಹದ ಹಾವು. ಇದು ಭಾರತದಲ್ಲಿ ಕಂಡುಬರುವ ಕೆಂಪು ಸ್ಯಾಂಡ್ ಬೋವಾವನ್ನು ಹೋಲುತ್ತದೆ. ಆದರೆ ಇದರ ಬಾಲ ನಿಧಾನವಾಗಿ ತೆಳ್ಳಗಾಗುತ್ತಾ ಕೊನೆಯಲ್ಲಿ ಚೂಪಾದ ತುದಿ ಹೊಂದಿರುತ್ತದೆ. ಇದೇ ಈ ಹಾವನ್ನು ಗುರುತಿಸಲು ಪ್ರಮುಖ ಲಕ್ಷಣವಾಗಿದೆ.

ಕೆಂಪು ಸ್ಯಾಂಡ್ ಬೋವಾ

ರಾಜಸ್ಥಾನದ ಹಲವು ಪ್ರದೇಶಗಳಿಂದ ಇಂತಹ ಹಾವುಗಳ ಫೋಟೋಗಳು ಈ ಹಿಂದೆ ಸಂಶೋಧಕರಿಗೆ ಬಂದಿದ್ದರೂ, ವೈಜ್ಞಾನಿಕವಾಗಿ ಜಾತಿಯನ್ನು ಖಚಿತಪಡಿಸಲು ಸಾಧ್ಯವಾಗಿರಲಿಲ್ಲ. ಬಿಕಾನೇರ್, ಹನುಮಾನ್‌ಗಢ್ ಹಾಗೂ ಜೈಸಲ್ಮೇರ್‌ನಲ್ಲೂ ಇಂತಹ ಹಾವುಗಳು ಕಂಡಿರುವ ವರದಿಗಳಿವೆ.

ಇದನ್ನೂ ಓದಿ: ‘ರಾಮಾಯಣ’ ಹೊಸ ಪೋಸ್ಟರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಲುಕ್‌ಗೆ ಫ್ಯಾನ್ಸ್ ಫಿದಾ! | Ramayana posters

ಈ ಪತ್ತೆಯಿಂದ ಸಿಸ್ತಾನ್ ಸ್ಯಾಂಡ್ ಬೋವಾ ಮರಳು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೊಲ, ತೋಟ ಹಾಗೂ ಜನವಸತಿ ಪ್ರದೇಶಗಳ ಸಮೀಪವೂ ಈ ಹಾವು ವಾಸಿಸುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ರಾಜಸ್ಥಾನದಲ್ಲಿ ಇದರ ವಾಸ ವ್ಯಾಪ್ತಿ ಮತ್ತು ಸಂಖ್ಯೆಯನ್ನು ತಿಳಿಯಲು ಇನ್ನಷ್ಟು ಅಧ್ಯಯನ ಅಗತ್ಯವಿದೆ. (ಏಜೆನ್ಸೀಸ್)