ನ್ಯೂಸ್

ಏಕಕಾಲದಲ್ಲಿ ಸಹೋದರಿಯರನ್ನು ವರಿಸಿದ 6 ಸಹೋದರರು! 1 ಲಕ್ಷ ರೂ.ನಲ್ಲಿ ಮುಗಿಯಿತು ಮದುವೆ | Marriage

Marriage : ಪಾಕಿಸ್ತಾನದ ಪಂಜಾಬ್​ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಆರು ಸಹೋದರರು ಬೇರೆ ಗ್ರಾಮದ ಆರು ಸಹೋದರಿಯರನ್ನು ಏಕಕಾಲದಲ್ಲಿ ವಿವಾಹವಾಗಿದ್ದಾರೆ. ಬಹುಶಃ ಈ ವಿಶೇಷ ಮದುವೆ ಜಗತ್ತಿನಲ್ಲಿ ಇದೇ ಮೊದಲೆನಿಸಿದೆ.

ಈ ವಿಶೇಷ ಮದುವೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಮುಲ್ತಾನ್​ ನಗರದಲ್ಲಿ ನಡೆದಿದೆ. ಸಾಮೂಹಿಕ ವಿವಾಹದ ಮೂಲಕ ಆರು ಜೋಡಿಗಳು ತಮ್ಮ ಮದುವೆಯನ್ನು ಅತ್ಯಂತ ಸರಳವಾಗಿ ಮುಗಿಸಿದರು. ಅಲ್ಲದೆ, ದೊಡ್ಡ ಮೊತ್ತದ ಹಣವನ್ನು ಕೂಡ ಉಳಿಸಿದ್ದಾರೆ. ಮದುವೆಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಆರು ಸಹೋದರರು ಇದೀಗ ತುಂಬಾ ಖುಷಿಯಾಗಿದ್ದಾರೆ.

ಸಹೋದರರಲ್ಲಿ ಹಿರಿಯರಾದ ಶೆಹಬಾಜ್, ತನ್ನ ತಮ್ಮಂದಿರು ಮದುವೆ ವಯಸ್ಸಿಗೆ ಬರುವವರೆಗೂ ತಮ್ಮ ಮದುವೆಯನ್ನು ಮುಂದೂಡಿದ್ದರು. ಈ ಬಗ್ಗೆ ಮಾತನಾಡಿದ ಅವರು ನಾವು ಮದುವೆ ಪ್ರಕ್ರಿಯೆಯನ್ನು ಸರಳವಾಗಿ ಮುಗಿಸಲು ಬಯಸಿದೆವು. ವಧುವಿನ ಕುಟುಂಬದ ಮೇಲೆ ಅನಗತ್ಯವಾದ ಆರ್ಥಿಕ ಹೊರೆಗಳನ್ನು ತಪ್ಪಿಸಲು ಒಟ್ಟಿಗೆ ಮದುವೆಯಾಗಲು ನಿರ್ಧರಿಸಿದೆವು ಎಂದಿದ್ದಾರೆ.

ಸಹೋದರರು, ವಧುವಿನ ಕುಟುಂಬದಿಂದ ಸಾಂಪ್ರದಾಯಿಕವಾದ "ಸಲಾಮಿ" (ನಗದು ಉಡುಗೊರೆಗಳು) ಅನ್ನು ಸಹ ನಿರಾಕರಿಸಿದ್ದು, ಯಾವುದೇ ಒತ್ತಡ ಬೀಳದಂತೆ ಸರಳವಾಗಿ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೆಚ್ಚಿನ ಆಹ್ವಾನವಿಲ್ಲದೆ ಕೇವಲ 100 ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆಯಿತು. ಈ ಆರು ಮದುವೆ ಸಮಾರಂಭಗಳಿಗೆ ಕೇವಲ 1 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಕೇವಲ 30 ಸಾವಿರ ರೂ. ಅಷ್ಟೇ. ವಧುವಿನ ಮನೆಯವರ ಮೇಲೆ ಆರ್ಥಿಕ ಹೊರೆ ಹೊರಿಸದಿರಲು ನಿರ್ಧರಿಸಿ ವರದಕ್ಷಿಣೆಯಂತಹ ಅನಗತ್ಯ ಸಂಪ್ರದಾಯಗಳನ್ನು ಸಹ ವರರು ಸಂಪೂರ್ಣವಾಗಿ ತ್ಯಜಿಸಿದರು.

ಈ ಮದುವೆ ಸಾಮಾಜಿಕವಾಗಿ ಸಂದೇಶವನ್ನು ಸಹ ರವಾನಿಸಿದೆ. ಈ ಆರು ಜೋಡಿಗಳ ವಿಶಿಷ್ಟ ದಾಂಪತ್ಯ ಪಾಕಿಸ್ತಾನ ಮಾತ್ರವಲ್ಲದೆ ಇತರ ದೇಶಗಳಲ್ಲೂ ಚರ್ಚೆಯ ವಿಷಯವಾಗಿದೆ. (ಏಜೆನ್ಸೀಸ್)