ನ್ಯೂಸ್

49 ಕೆಜಿ ಚಿನ್ನ, 38.4 ಕೋಟಿ ರೂ. ವ್ಯವಹಾರ! ಬಗೆದಷ್ಟೂ ಬಯಲಾಗ್ತಿದೆ ರನ್ಯಾ 'ಚಿನ್ನ'ಕಾಲ | Ranya Rao

Ranya Rao: ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಎ1 ಆರೋಪಿ ನಟಿ ರನ್ಯಾ ರಾವ್​, ಗೋಲ್ಡ್ ಸ್ಮಂಗ್ಲಿಂಗ್ ಮಾಡುವುದರಲ್ಲಿ ಎಷ್ಟು ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ ಎಂಬುದು ತನಿಖೆಯಲ್ಲಿ ಇಂಚಿಂಚಾಗಿ ಬಯಲಾಗುತ್ತಿದೆ.

ಸ್ಫೋಟಕ ಸತ್ಯ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದ ಚಿನ್ನಾಭರಣ ವ್ಯಾಪಾರಿ ಸಾಹಿಲ್​ ಸಕಾರಿಯಾ ಜೈನ್​, ಡಿಆರ್​ಐ ಕೈಗೊಂಡ ತನಿಖೆಯಲ್ಲಿ ಸ್ಪೋಟಕ ಸತ್ಯವನ್ನು ಬಾಯ್ಬಿಟ್ಟಿರುವುದು ಇತ್ತೀಚಿನ ವರದಿಯಲ್ಲಿ ಸ್ಪಷ್ಟವಾಗಿದೆ. ಬಳ್ಳಾರಿ ಮೂಲದ ಸಾಹಿಲ್​, ಈಗ ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ವಾಸವಿದ್ದಾನೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್‌ಗೆ 40 ಕೋಟಿ ರೂ.ಗೂ ಹೆಚ್ಚು ಮೌಲ್ಯದ 49 ಕೆಜಿ ಕಳ್ಳಸಾಗಣೆ ಚಿನ್ನವನ್ನು ಮಾರಾಟ ಮಾಡಲು ಸಹಾಯ ಮಾಡಿರುವುದು ಡಿಆಐ ತನಿಖೆಯಲ್ಲಿ ಬಯಲಾಗಿದೆ.

2024ರ ನವೆಂಬರ್‌ನಲ್ಲಿ ರನ್ಯಾ ಜತೆಗೆ ಸಂಪರ್ಕಕ್ಕೆ ಬಂದ ಜೈನ್, ಕಳ್ಳಸಾಗಣೆ ಚಿನ್ನವನ್ನು ಮಾರಾಟ ಮಾಡಲು ಹೇಗೆ ಸಹಾಯ ಮಾಡಿದ ಎಂಬುದು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್​ಐ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ವಿವರಿಸಲಾಗಿದೆ. ಮಾರ್ಚ್ 26ರಂದು ಬಂಧಿಸಲ್ಪಟ್ಟ ಜೈನ್​ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿ ಅವಧಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್​ ಅತನನ್ನು ಮತ್ತೆ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತು.

ಇದರ ಬೆನ್ನಲ್ಲೇ ಆರೋಪಿಯನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ರನ್ಯಾ ರಾವ್, ತರುಣ್ ಕೊಂಡೂರು ರಾಜು ಬಳಿಕ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂರನೇ ಆರೋಪಿ ಸಾಹಿಲ್​ ಎಂಬುದು ಗಮನಾರ್ಹ.

ಚಿನ್ನದ ವ್ಯವಹಾರ- ಹವಾಲಾ ವಹಿವಾಟು

ಕಳ್ಳಸಾಗಣೆ ಚಿನ್ನವನ್ನು ಮಾರಾಟ ಮಾಡುವಲ್ಲಿ ಮತ್ತು ಹವಾಲಾ ವಹಿವಾಟುಗಳನ್ನು ನಿರ್ವಹಿಸುವಲ್ಲಿ ಜೈನ್ ನಟಿಗೆ ದೊಡ್ಡ ಮಟ್ಟದ ಸಹಾಯ ಮಾಡಿದ್ದಾನೆ. ಈ ಪ್ರಕರಣದಲ್ಲಿ ಸಾಹಿಲ್​ ಜೈನ್​, ನಿರ್ಣಾಯಕ ಪಾತ್ರವನ್ನೇ ವಹಿಸಿರುವುದು ಬೆಳಕಿಗೆ ಬಂದಿದೆ. ರನ್ಯಾ ರಾವ್ ಸುಮಾರು 40 ಕೋಟಿ ರೂ. ಮೌಲ್ಯದ 49.6 ಕೆಜಿ ಚಿನ್ನವನ್ನು ವಿಲೇವಾರಿಗಾಗಿ ಮತ್ತು ದುಬೈಗೆ 38.4 ಕೋಟಿ ರೂ. ಹವಾಲಾ ಹಣವನ್ನು ವರ್ಗಾಯಿಸಲು ಜೈನ್ ಸಹಾಯಹಸ್ತ ನೀಡಿರುವುದು ಸ್ಪಷ್ಟವಾಗಿದೆ.

ಬೆಂಗಳೂರಿನಲ್ಲಿರುವ ರನ್ಯಾಗೆ 1.7 ಕೋಟಿ ರೂ. ಹವಾಲಾ ಹಣವನ್ನು ವರ್ಗಾಯಿಸಲು ತಾನು ಸಹಾಯ ಮಾಡಿದ್ದಾಗಿ ಕಡೆಗೂ ಸಾಹಿಲ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಆರ್‌ಐ ತಿಳಿಸಿದೆ. ದಾಖಲೆಗಳ ಪ್ರಕಾರ, ಇದೊಂದು ಸಹಾಯಕ್ಕಾಗಿ ರನ್ಯಾ 55,000 ರೂ. ಕಮಿಷನ್ ಹಣವನ್ನು ಜೈನ್​ಗೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಜೈನ್​ ಕೂಡ ಒಪ್ಪಿಕೊಂಡಿದ್ದಾನೆ ಎಂದು ಹೇಳಿದೆ.

ವಹಿವಾಟುಗಳ ವಿವರ

ನವೆಂಬರ್ 2024: 6.8 ಕೋಟಿ ರೂ. ಮೌಲ್ಯದ 8.9 ಕೆಜಿ ಚಿನ್ನವನ್ನು ಮಾರಾಟ ಮಾಡಲು ಜೈನ್ ಮುಂದಾಗಿದ್ದ ಮತ್ತು ದುಬೈಗೆ 6.5 ಕೋಟಿ ರೂ. ಹವಾಲಾ ಹಣವನ್ನು ವರ್ಗಾಯಿಸಲು ಸಹಾಯಹಸ್ತ ನೀಡಿದ್ದ. ಬೆಂಗಳೂರಿನಲ್ಲಿ ರನ್ಯಾಗೆ 32 ಲಕ್ಷ ರೂ.ಗಳನ್ನು ಸಹ ಹಸ್ತಾಂತರಿಸಿದ್ದ.

ಡಿಸೆಂಬರ್ 2024: ಜೈನ್ 9.9 ಕೋಟಿ ರೂ. ಮೌಲ್ಯದ 12.6 ಕೆಜಿ ಚಿನ್ನವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದ. ಮತ್ತು ದುಬೈಗೆ 9.6 ಕೋಟಿ ರೂ. ಹವಾಲಾ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟಿದ್ದ.

ಜನವರಿ 2025: 11.5 ಕೋಟಿ ರೂ. ಮೌಲ್ಯದ 14.5 ಕೆಜಿ ಚಿನ್ನವನ್ನು ಮಾರಾಟ ಮಾಡಲು ಸಹಾಯ ಮಾಡಿದ್ದಲ್ಲದೇ 11 ಕೋಟಿ ರೂ. ಹವಾಲಾ ಹಣವನ್ನು ದುಬೈಗೆ ವರ್ಗಾಯಿಸಿದ್ದ. ಇದರೊಟ್ಟಿಗೆ 55 ಲಕ್ಷ ರೂ. ಹಸ್ತಾಂತರಿಸಿದ್ದ.

ಇದನ್ನೂ ಓದಿ: ಲಕ್ಕುಂಡಿ ನರೇಗಾ ಕಾಮಗಾರಿ ಪರಿಶೀಲನೆ, ಉದ್ಯೋಗಖಾತ್ರಿಯಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು – ಸಿಇಓ ಭರತ್ಫೆಬ್ರವರಿ 2025: ಜೈನ್ 11.8 ಕೋಟಿ ರೂ. ಮೌಲ್ಯದ 13.4 ಕೆಜಿ ಚಿನ್ನವನ್ನು ದುಬೈಗೆ ಮಾರಾಟ ಮಾಡಿದ್ದ ಮತ್ತು 11.2 ಕೋಟಿ ರೂ. ಹವಾಲಾ ಹಣವನ್ನು ರನ್ಯಾಗೆ ಕಳುಹಿಸಲು ಸಹಾಯ ನೀಡಿದ್ದ.

ಚಿನ್ನ ಕಳ್ಳಸಾಗಣೆ ಹಿಂದಿರುವ ದೊಡ್ಡ ಜಾಲ ಹಾಗೂ ಬೆಂಗಳೂರು ಮತ್ತು ಅದರಾಚೆಗಿನ ಇತರ ಹವಾಲಾ ನಿರ್ವಾಹಕರು ಮತ್ತು ಖರೀದಿದಾರರೊಂದಿಗೆ ಸಂಭಾವ್ಯ ಸಂಪರ್ಕಗಳ ಬಗ್ಗೆ ಡಿಆರ್​ಐ ತನಿಖೆಯನ್ನು ಮುಂದುವರೆಸಿದೆ.

ಏನಿದು ಪ್ರಕರಣ?

ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್​ ಅವ​ರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).