Chhattisgarh Elephant: ಛತ್ತೀಸ್ಗಢದ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕೊರ್ಬಾ ಜಿಲ್ಲೆಯಲ್ಲಿ ಆನೆಯೊಂದು ಟ್ರ್ಯಾಕ್ಟರ್ ಮೇಲೆ ದಾಳಿ ನಡೆಸಿ ಜಖಂಗೊಳಿಸಿದರೆ, ಸರ್ಗುಜಾ ಜಿಲ್ಲೆಯಲ್ಲಿ ಆನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ನಾಶಪಡಿಸಿದ್ದು, ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೊರ್ಬಾ ಅರಣ್ಯ ವಿಭಾಗದ ಕುಡ್ಮುರಾ ವಲಯದ ಜಿಲ್ಗಾ ಅರಣ್ಯ ಪ್ರದೇಶದಲ್ಲಿ 11 ರಿಂದ 16 ಆನೆಗಳ ಹಿಂಡು ಬೀಡುಬಿಟ್ಟಿತ್ತು. ಈ ಆನೆಗಳನ್ನು ಕಾಡಿನೊಳಗೆ ಓಡಿಸುವ ಉದ್ದೇಶದಿಂದ ಕೆಲವು ಗ್ರಾಮಸ್ಥರು ಟ್ರ್ಯಾಕ್ಟರ್ ತೆಗೆದುಕೊಂಡು ಅರಣ್ಯದೊಳಗೆ ಹೋಗಿ ಜೋರಾಗಿ ಶಬ್ದ ಮಾಡಿದ್ದಾರೆ.
ಇದರಿಂದ ಕೆರಳಿದ ಆನೆಯೊಂದು ಏಕಾಏಕಿ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿದೆ. ತನ್ನ ಸೊಂಡಿಲು ಮತ್ತು ಕಾಲಿನಿಂದ ಟ್ರ್ಯಾಕ್ಟರ್ನ ಮುಂಭಾಗವನ್ನು (ಬಾನೆಟ್) ಸಂಪೂರ್ಣವಾಗಿ ಜಖಂಗೊಳಿಸಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್ನಲ್ಲಿದ್ದ ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ಮತ್ತೊಂದೆಡೆ, ಸರ್ಗುಜಾ (ಅಂಬಿಕಾಪುರ) ಜಿಲ್ಲೆಯ ಬತೌಲಿ ಪ್ರದೇಶದ ತಿರಂಗ್ ಗ್ರಾಮಕ್ಕೆ ಮೂರು ಕಾಡಾನೆಗಳು ಲಗ್ಗೆ ಇಟ್ಟಿವೆ. ಗ್ರಾಮದ ರೈತರೊಬ್ಬರ ಸುಮಾರು 5 ಎಕರೆ ಪ್ರದೇಶದಲ್ಲಿದ್ದ ಹಾಗಲಕಾಯಿ ಬೆಳೆಯನ್ನು ಆನೆಗಳು ಸಂಪೂರ್ಣವಾಗಿ ತುಳಿದು ನಾಶಪಡಿಸಿವೆ.
ಬೆಳೆ ನಾಶಪಡಿಸುತ್ತಿದ್ದ ಆನೆಗಳನ್ನು ಓಡಿಸಲು ಗ್ರಾಮಸ್ಥರು ಮುಂದಾದಾಗ, ಆನೆಗಳು ಜನರ ಮೇಲೆಯೇ ಅಟ್ಟಿಸಿಕೊಂಡು ಬಂದಿವೆ. ಈ ದಾಳಿಯಲ್ಲಿ ಜಾಗೇಶ್ವರ್ (32) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಡಾನೆಗಳು ತಮ್ಮ ವಾಸಸ್ಥಳಕ್ಕೆ ಜನರು ಬಂದಾಗ ಅಥವಾ ವಾಹನಗಳಿಂದ ತೊಂದರೆಯಾದಾಗ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆನೆಗಳ ಹತ್ತಿರ ಹೋಗಬಾರದು. ಅವುಗಳನ್ನು ಓಡಿಸಲು ಪ್ರಯತ್ನಿಸದೆ, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.