'ನಿನ್ನ ಚಿಕ್ಕಪ್ಪ ಕಳ್ಳ' ಎಂದಿದ್ದಕ್ಕೆ ಬಾಲಕನಿಗೆ ಹೊಡೆದಿದ್ದ ಪ್ರಿಯಾಂಕಾ; ಹಳೇ ನೆನಪು ಬಿಚ್ಚಿಟ್ಟ ‘ಕೈ’ ನಾಯಕಿ | Priyanka Gandhi

Priyanka Gandhi
'ನನ್ನ ಚಿಕ್ಕಪ್ಪ ಕಳ್ಳನಲ್ಲ' ಎಂದು ಬಾಲಕನಿಗೆ ಹೊಡೆದಿದ್ದ ಪ್ರಿಯಾಂಕಾ ಗಾಂಧಿ!WEB
Published on: 

Priyanka Gandhi: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಶಾಲಾ ದಿನಗಳ ಸ್ವಾರಸ್ಯಕರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಬಳಿಕ ಶಾಲೆಗೆ ಹೋದಾಗ, ತಮ್ಮ ಚಿಕ್ಕಪ್ಪ ಸಂಜಯ್ ಗಾಂಧಿಯನ್ನು 'ಕಳ್ಳ' ಎಂದು ಕರೆದಿದ್ದ ಬಾಲಕನಿಗೆ ತಾವು ಹೊಡೆದಿದ್ದಾಗಿ ಹೇಳಿದ್ದಾರೆ.

ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಜತೆಗಿನ ಸಂಭಾಷಣೆ ವೇಳೆ ಈ ಘಟನೆಯನ್ನು ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಸಂಜಯ್ ಗಾಂಧಿಯನ್ನು ಕಳ್ಳ ಎಂದಿದ್ದ ಬಾಲಕ

1977ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ಬಳಿಕ ತಾವು ಬೇರೆ ಮನೆಗೆ ಸ್ಥಳಾಂತರಗೊಂಡಿದ್ದಾಗಿ ಪ್ರಿಯಾಂಕಾ ಹೇಳಿದ್ದಾರೆ. ಆ ಸಂದರ್ಭದಲ್ಲಿ ಮನೆಯಲ್ಲಿ ಸಾಕಷ್ಟು ಒತ್ತಡದ ವಾತಾವರಣ ಇತ್ತು ಎಂದು ನೆನಪಿಸಿಕೊಂಡಿದ್ದಾರೆ.

ಶಾಲೆಗೆ ಹೋದಾಗ ಒಬ್ಬ ಬಾಲಕ ಬಂದು, 'ನಿನ್ನ ಚಿಕ್ಕಪ್ಪ ಸಂಜಯ್ ಗಾಂಧಿ ಜೈಲಿನಲ್ಲಿದ್ದಾರೆ, ಅವರು ಕಳ್ಳ' ಎಂದು ಹೇಳಿದ್ದನಂತೆ. ಇದರಿಂದ ಕೋಪಗೊಂಡ ಪ್ರಿಯಾಂಕಾ ಆ ಬಾಲಕನಿಗೆ ಹೊಡೆದಿದ್ದರು. ಬಳಿಕ ಆತ ಅಳುತ್ತಾ ಶಿಕ್ಷಕರ ಬಳಿ ದೂರು ನೀಡಿದ್ದರಿಂದ ಪ್ರಿಯಾಂಕಾಗೆ ಶಿಕ್ಷಕರಿಂದ ಬೈಗುಳ ಸಿಕ್ಕಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.

ಶಾಲಾ ದಿನಗಳನ್ನು ನೆನಪಿಸಿಕೊಂಡ ರಾಹುಲ್

ಇದೇ ವೇಳೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ತಮ್ಮ ಶಾಲಾ ದಿನಗಳ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಶಾಲೆಯಲ್ಲಿ ನಿಯಮಗಳನ್ನು ಪಾಲಿಸುತ್ತಿದ್ದರೆ, ತಾವು ಪ್ರಶ್ನೆಗಳನ್ನು ಕೇಳುತ್ತಾ ತುಸು ತುಂಟಾಟ ಮಾಡುತ್ತಿದ್ದೆ ಎಂದು ರಾಹುಲ್ ಹೇಳಿದ್ದಾರೆ.

ಶಾಲೆಯಲ್ಲಿ ಪ್ರಿಯಾಂಕಾ ಪ್ರಿಫೆಕ್ಟ್ ಆಗಿಯೂ ಕಾರ್ಯನಿರ್ವಹಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ಶಾಲೆಗೆ ಹೋದಾಗ ಯಾರೂ ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಏಳನೇ ವರ್ಷದ ಹುಟ್ಟುಹಬ್ಬದಂದು ಒಬ್ಬ ಸ್ನೇಹಿತನನ್ನು ಹೊರತುಪಡಿಸಿ ಬೇರೆ ಯಾರೂ ಬಂದಿರಲಿಲ್ಲ ಎಂದು ರಾಹುಲ್ ನೆನಪಿಸಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಪುಸ್ತಕದ ಚರ್ಚೆ

ಸೋನಿಯಾ ಗಾಂಧಿ ಅವರ ಆತ್ಮಕಥನ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಬಿಡುಗಡೆಗೊಂಡ ಬೆನ್ನಲ್ಲೇ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅಂಗಾಂಗ ಕಸಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಹಂದಿ ಕಿಡ್ನಿಯೊಂದಿಗೆ ಒಂದು ವರ್ಷ ಪೂರೈಸಿದ 58ರ ಮಹಿಳೆ | Pig Kidney Transplant

1975ರ ಜೂನ್‌ನಿಂದ 1977ರ ಮಾರ್ಚ್‌ವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಹಲವು ಘಟನೆಗಳನ್ನೂ ಪುಸ್ತಕದಲ್ಲಿ ವಿವರಿಸಲಾಗಿದೆ. 1977ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತಿದ್ದರು. ಬಳಿಕ 1980ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ್ದರು.