ನ್ಯೂಸ್

ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಆರೋಪಿಗಳ ಸ್ಥಳಾಂತರ: ಬೆಂಗಳೂರಿನ ಹೆಗಡೆ ನಗರದ ಹಜ್​ಭವನಕ್ಕೆ ಪುಂಡರು

kumarvrl

ಬೆಂಗಳೂರು: ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ರಾಮನಗರದ ಜೈಲಿನಲ್ಲಿದ್ದ ಪಾದರಾಯನಪುರದ ಪುಂಡರನ್ನು ಬೆಂಗಳೂರು ನಗರದ ಹೊರ ವಲಯದಲ್ಲಿರುವ ಹೆಗಡೆನಗರಕ್ಕೆ ಸ್ಥಳಾಂತರಿಸಿದೆ.

ಹೆಗಡೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್​ ಭವನದಲ್ಲಿ 116 ಮಂದಿಯನ್ನು ಪೊಲೀಸರು ರಾಮನಗರ ಜೈಲಿನಿಂದ 8 ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಕರೆದುಕೊಂಡು ಕ್ವಾರಂಟೈನ್​ ಮಾಡಿದ್ದಾರೆ.

ಪಾದರಾಯನಪುರದಲ್ಲಿ ಸೀಲ್​ಡೌನ್​ ವೇಳೆ ಗಲಭೆ ನಡೆಸಿದ್ದ 116 ಮಂದಿಯನ್ನು ಪೊಲೀಸರು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಿದ್ದರು. ನಂತರ ಇವರನ್ನು ರಾಮನಗರ ಜೈಲಿಗೆ ಕಳುಹಿಸಲಾಗಿತ್ತು. ಇದಕ್ಕೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ.ಸುರೇಶ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 116 ಮಂದಿಯಲ್ಲಿ 5 ಮಂದಿಗೆ ಕರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಪುಂಡರಲ್ಲಿ ಕರೊನಾ ಸೋಂಕು ಪತ್ತೆಯಾಗುತ್ತಿದ್ದಂತೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿ ಆರೋಪಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡದಿದ್ದರೇ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಎಲ್ಲ ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.

ರಾಮನಗರದಲ್ಲಿ ಯಾವುದೇ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ಇಲ್ಲಿಗೆ ಸೋಂಕಿತರನ್ನು ಸರ್ಕಾವರೇ ಸ್ಥಳಾಂತರ ಮಾಡಿರುವುದು ಇಲ್ಲಿಯ ಜನರಲ್ಲೂ ನಿದ್ದೆಗೆಡಿಸಿತ್ತು.

ತಿರುಮೇನಹಳ್ಳಿಯಲ್ಲೂ ನಾಗರಿಕರ ಪ್ರತಿಭಟನೆ: ಸರ್ಕಾರ ಪಾದರಾಯನಪುರದ ಸೋಂಕಿತರನ್ನು ತಿರುಮೇನಹಳ್ಳಿಯ ಹಜ್​ ಭವನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಹಜ್​ ಭವನದಲ್ಲಿ ಈಗಾಗಲೇ ನೆರೆ ರಾಜ್ಯ ಹಾಗೂ ವಿದೇಶಿ ಪ್ರಜೆಗಳನ್ನು ಕ್ವಾರಂಟೈನ್​ ಮಾಡಿತ್ತು. ಈಗ ಅವರನ್ನು ಬೇರೆ ಕಡೆ ಸ್ಥಳಾಂತರಿಸಿ ಸೋಂಕಿತರನ್ನು ಕ್ವಾರಂಟೈನ್​ ಮಾಡಲು ಮುಂದಾಗಿದೆ. ಇದರಿಂದ ಹಜ್​ಭವನದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದೆ. ಕೂಡಲೇ ಸೋಂಕಿತರನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.