More

    ನನ್ನ ಮೇಲಿನ ದ್ವೇಷಕ್ಕಾಗಿ ಜನರಿಗೆ ತೊಂದರೆ ಕೊಡಬೇಡಿ: ಮಾಜಿ ಸಿಎಂ ಎಚ್​ಡಿಕೆ

    ಮೈಸೂರು: ಪಾದರಾಯನಪುರ ಪುಂಡರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ನನ್ನ ಮೇಲಿನ ದ್ವೇಷಕ್ಕಾಗಿ ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಕಿಡಿಕಾರಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಅಲೋಕ್ ಮೋಹನ್ ಬೆಂಗಳೂರು ಪೊಲೀಸ್ ಕಮಿಷನರ್ ಆಗಬೇಕೆಂದು ಪ್ರಯತ್ನಿಸಿದ್ದರು. ಅವರ ಹಿನ್ನೆಲೆ ಗೊತ್ತಿದ್ದ ಕಾರಣಕ್ಕೆ ನಾನು ನೇಮಕ ಮಾಡಲಿಲ್ಲ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಹೀಗೆಲ್ಲ ಮಾಡಿದ್ದಾರೆ ಎಂದು ಅನಿಸುತ್ತಿದೆ. ನನ್ನ ಮೇಲಿನ ಕೋಪಕ್ಕೆ ನನ್ನ ಜನರಿಗೆ ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

    ನಾನು ಈಗಾಗಲೇ ಸಿಎಂ ಹಾಗೂ ಗೃಹ ಸಚಿವರಿಗೆ ಹೇಳಿದ್ದೇನೆ. ಇಂತಹ ಅಧಿಕಾರಿಗಳಿಂದಲೇ ಸರ್ಕಾರ ಸಾರ್ವಜನಿಕವಾಗಿ ಪದೇ ಪದೇ ಮುಜುಗರ ಅನುಭವಿಸುತ್ತಿದೆ. ಪ್ರತಿಪಕ್ಷ, ಮಾಧ್ಯಮ ಸೇರಿದಂತೆ ಎಲ್ಲರೂ ಸರ್ಕಾರಕ್ಕೆ ಬೆಂಬಲ ಕೊಡುತ್ತಿದ್ದಾರೆ. ಸರ್ಕಾರ ಪದೇ ಪದೇ ತಪ್ಪು ಮಾಡಿದರೆ ಬೆಂಬಲ ನಿಲ್ಲಿಸಿ, ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೆಡ್‌ಝೋನ್‌ನಿಂದ ಗ್ರೀನ್‌ಝೋನ್‌ಗೆ ಶಿಫ್ಟ್ ಮಾಡಬೇಡಿ ಎಂದು ಆಗಲೇ ಸರ್ಕಾರಕ್ಕೆ ಹೇಳಿದ್ದೆ. ಆದರೂ ಮೊದಲ ತಂಡದಲ್ಲಿ 49, ಎರಡನೇ ತಂಡದಲ್ಲಿ 72 ಜನರನ್ನು ಶಿಫ್ಟ್ ಮಾಡಿದ್ದರು. ಈಗ ಮೊದಲ ಹಂತದಲ್ಲಿ ಬಂದ 49 ಜನರ ಪೈಕಿ ಇಬ್ಬರಿಗೆ ಸೋಂಕು ತಗುಲಿದೆ. ಇದರಿಂದ ಇಡೀ ಜೈಲನ್ನು ಸೀಲ್ ಮಾಡಿ ಕ್ವಾರಂಟೈನ್ ಮಾಡಬೇಕಾಗಿದೆ. ಅಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬಸ್ಥರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಇದರಿಂದ ಗ್ರೀನ್ ಜೋನ್​ನಲ್ಲಿದ್ದ ರಾಮನಗರದ ಜನ ಆತಂಕ ಅನುಭವಿಸುತ್ತಿದ್ದಾರೆ ಎಂದರು.

    ಸ್ಥಳಾಂತರ ಸಂದರ್ಭದಲ್ಲಿ ಮೆಡಿ ಕೇರ್ ತೆಗೆದುಕೊಳ್ಳದೆ ಇಷ್ಟು ಗೊಂದಲ ಆಗಿದೆ. ಈಗಲೂ ಅವರನ್ನು ಮತ್ತೆ ಸ್ಥಳಾಂತರ ಮಾಡುವಾಗ ಎಚ್ಚರ ವಹಿಸಲಿ. ಬಂಧಿತರಿಗೆ ಪಿಪಿಇ ಕಿಟ್ ಬಳಸಿ ಸ್ಥಳಾಂತರ ಮಾಡಲಿ. ಸ್ಥಳಾಂತರ ವಿಚಾರದಲ್ಲೂ ಅಲೋಕ್ ಮೋಹನ್ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೈಲಿನ ಮುಂದೆ ಬಂದಿದ್ದ ಬಸ್‌ಗಳನ್ನು ವಾಪಸ್ ಕಳುಹಿಸಿದ್ದಾರೆ. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಇವರು ಯಾರು? ಗೃಹ ಮಂತ್ರಿಗಳು ಇವರ ಉಡಾಫೆ ಮಾತು ನಂಬುವುದು ಬೇಡ. ಹೇಳಿರುವಂತೆ ಮಧ್ಯಾಹ್ನ 2 ಗಂಟೆ ಒಳಗೆ ಇವರನ್ನು ಸ್ಥಳಾಂತರ ಮಾಡಿ ಎಂದು ಎಚ್​ಡಿಕೆ ಹೇಳಿದರು. (ದಿಗ್ವಿಜಯ ನ್ಯೂಸ್​)

    ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕುಸಿದ ರಸ್ತೆ: ವಾಹನಗಳು ಚೆಲ್ಲಾಪಿಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts