ನ್ಯೂಸ್

ಕಾಶ್ಮೀರ ಟು ಅಯೋಧ್ಯೆ, ಈಗ ಚುನಾವಣಾ ಆಯೋಗದಲ್ಲಿ ಆಂತರಿಕ ಯುದ್ಧ!...ಇಲ್ಲಿದೆ ನೋಡಿ ಜ್ಞಾನೇಶ್ ಕುಮಾರ್ ಸಂಪೂರ್ಣ ಪಯಣ! | Gyanesh Kumar

ನವದೆಹಲಿ: ಕಳೆದ ವರ್ಷ ಫೆಬ್ರವರಿಯಲ್ಲಿ (2025) ಜ್ಞಾನೇಶ್ ಕುಮಾರ್ (Gyanesh Kumar) ಅವರು ಭಾರತದ 26 ನೇ ಮುಖ್ಯ ಚುನಾವಣಾ ಆಯುಕ್ತರಾಗಿ (CEC) ಅಧಿಕಾರ ವಹಿಸಿಕೊಂಡಾಗ, ಅವರ ಹಿಂದಿನ ಸಾಧನೆಗಳೇ ಮುನ್ನೆಲೆಗೆ ಬಂದಿದ್ದವು.

ನವದೆಹಲಿ: ಕಳೆದ ವರ್ಷ ಫೆಬ್ರವರಿಯಲ್ಲಿ (2025) ಜ್ಞಾನೇಶ್ ಕುಮಾರ್ (Gyanesh Kumar) ಅವರು ಭಾರತದ 26 ನೇ ಮುಖ್ಯ ಚುನಾವಣಾ ಆಯುಕ್ತರಾಗಿ (CEC) ಅಧಿಕಾರ ವಹಿಸಿಕೊಂಡಾಗ, ಅವರ ಹಿಂದಿನ ಸಾಧನೆಗಳೇ ಮುನ್ನೆಲೆಗೆ ಬಂದಿದ್ದವು. ಮುಖ್ಯವಾಗಿ, ಜಮ್ಮು-ಕಾಶ್ಮೀರದ ವಿಧಿ 370 ರದ್ದತಿ ಮತ್ತು ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ರಚನೆಯಲ್ಲಿ ಅವರು ವಹಿಸಿದ್ದ ಪ್ರಮುಖ ಪಾತ್ರವು ಅವರ ವೃತ್ತಿಜೀವನದ ದೊಡ್ಡ ಮೈಲಿಗಲ್ಲಾಗಿ ಸುದ್ದಿಯಾಗಿತ್ತು.

ಆದರೆ, ಅಧಿಕಾರ ವಹಿಸಿಕೊಂಡ 19 ತಿಂಗಳ ಬಳಿಕ, ಜ್ಞಾನೇಶ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳಿಗೆ, ಅವರ ಜೊತೆಗಿನ ಇಬ್ಬರು ಚುನಾವಣಾ ಆಯುಕ್ತರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವುದು ಈ ಕಠಿಣ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ತರದೆ ಹೊರಡಿಸಲಾದ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಈ ಆಕ್ಷೇಪಣೆಗಳಲ್ಲಿ ಮತದಾರರ ನೋಂದಣಿಯ ಶಾಸನಬದ್ಧ ಅರ್ಜಿ ಫಾರ್ಮ್ 6 ರಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ಡೇಟಾಬೇಸ್ ಮೇಲಿನ ಕೇಂದ್ರೀಕೃತ ನಿಯಂತ್ರಣವೂ ಸೇರಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಿಇಸಿ ನಿರ್ಧಾರಗಳು ಅಕ್ರಮವಾಗಿದ್ದರೆ ರಾಷ್ಟ್ರಪತಿಯನ್ನೇಕೆ ಭೇಟಿಯಾಗಲಿಲ್ಲ...? ಚುನಾವಣಾ ಆಯುಕ್ತರ ನಡೆ ಪ್ರಶ್ನಿಸಿದ ರಾಜಕೀಯ ವಿಶ್ಲೇಷಕರು! | Election Commission

ಆದಾಗ್ಯೂ, ಚುನಾವಣಾ ಆಯೋಗವು ವಿಭಿನ್ನ ಅಭಿಪ್ರಾಯಗಳು ಸಮಾಲೋಚನೆಯ ಸಾಮಾನ್ಯ ಭಾಗವಾಗಿದ್ದು, ಎಸ್​ಐಆರ್​ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ಅದರ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಎಂದು ಹೇಳಿದೆ. ಇತ್ತ ಸಂಧು ಅಥವಾ ಜೋಶಿ ಇಬ್ಬರೂ ತಮ್ಮ ಹೆಸರಿನಲ್ಲಿ ಪ್ರಕಟವಾದ ಈ ಆಕ್ಷೇಪಣೆಗಳ ಬಗ್ಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ವಿಷಯ ಬಹಿರಂಗವಾದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮೇಲಿನ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಎಸ್​ಐಆರ್​ ನೆಪದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ, ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ರಾಹುಲ್​ ಗಾಂಧಿಗೆ ಸವಾಲ್​ ಎಸೆದಿದ್ದ ಜ್ಞಾನೇಶ್ ಕುಮಾರ್

ಇದಕ್ಕೂ ಮುನ್ನ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮತ ಕಳ್ಳತನ ಆರೋಪಕ್ಕೆ ಜ್ಞಾನೇಶ್ ಕುಮಾರ್ ಅವರು ನೀಡಿದ್ದ ಪ್ರತಿಕ್ರಿಯೆಯೂ ಟೀಕೆಗೆ ಗುರಿಯಾಗಿತ್ತು. ರಾಹುಲ್ ಆರೋಪಕ್ಕೆ ಸವಾಲ್​ ಎಸೆದಿದ್ದ ಸಿಇಸಿ, ಪ್ರಮಾಣಪತ್ರದ ಮೂಲಕ ಸಾಬೀತುಪಡಿಸಬೇಕು ಎಂದು ಆಗ್ರಹಿಸಿದ್ದರು.

ಜ್ಞಾನೇಶ್ ಕುಮಾರ್ ಅವರ ನೇಮಕಾತಿಯೇ ಆರಂಭದಲ್ಲಿ ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟು, ಅವರ ಜಾಗದಲ್ಲಿ ಪ್ರಧಾನಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಸಂಪುಟ ಸಚಿವರನ್ನು ಸೇರಿಸಿದ 2023 ರ ಹೊಸ ಕಾಯಿದೆಯಡಿಯಲ್ಲಿ ಆಯ್ಕೆಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಈ ಮೂರು ಸದಸ್ಯರ ಸಮಿತಿಯಲ್ಲಿ ಸರ್ಕಾರಕ್ಕೆ ಇಬ್ಬರು ಸದಸ್ಯರ ಬೆಂಬಲ ಸಿಗುತ್ತದೆ.

ನಿನ್ನೆ (ಬುಧವಾರ ಸೆ.23) 2023 ರ ಈ ನೇಮಕಾತಿ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಸ್ತ್ರುತ ಪೀಠಕ್ಕೆ ವರ್ಗಾಯಿಸಬೇಕೇ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು ಭಿನ್ನ ತೀರ್ಪು ನೀಡಿದೆ.

ಜ್ಞಾನೇಶ್ ಕುಮಾರ್ ವೃತ್ತಿಜೀವನದ ಹಿನ್ನೆಲೆ ಹೀಗಿದೆ!...

ಕೇರಳ ಕೆಡರ್‌ನ 1988 ರ ಬ್ಯಾಚ್‌ನ ಐಎಎಸ್​ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್, 2024ರ ಜನೆವರಿಯಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು. ನಂತರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು, ಅಂದರೆ ಮಾರ್ಚ್‌ನಲ್ಲಿ ಚುನಾವಣಾ ಆಯೋಗಕ್ಕೆ ಸೇರಿದರು. ಕಳೆದ ವರ್ಷ ಫೆಬ್ರವರಿ 19 ರಂದು ಸಿಇಸಿ ಆಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿ 2029ರ ಜನವರಿ 26 ರಂದು ಕೊನೆಗೊಳ್ಳಲಿದೆ.

ಜ್ಞಾನೇಶ್ ಕುಮಾರ್ ಅವರು ಈ ಹುದ್ದೆಗೆ ಬರುವುದಕ್ಕಿಂತ ಮುಂಚೆ ಕೇರಳ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಂದ್ರ ಗೃಹ ಸಚಿವಾಲಯದಲ್ಲಿದ್ದಾಗ, ವಿಧಿ 370 ರದ್ದತಿಯ ನಂತರದ ನಿರ್ಧಾರಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಮ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಂತರ ಅವರು ಸಂಸದೀಯ ವ್ಯವಹಾರಗಳು ಮತ್ತು ಸಹಕಾರ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೆ, ಅವರು ರಕ್ಷಣಾ ಸಚಿವಾಲಯದಲ್ಲಿ ಮತ್ತು ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಅವರ ಪ್ರೊಫೈಲ್ ಪ್ರಕಾರ, ಅವರು ಕಾನ್ಫುರದ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್, ಭಾರತೀಯ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ಸ್ ಸಂಸ್ಥೆಯಿಂದ (ICFAI) ಬಿಸಿನೆಸ್ ಫೈನಾನ್ಸ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪರಿಸರ ಅರ್ಥಶಾಸ್ತ್ರ ಅಭ್ಯಾಸ ಮಾಡಿದ್ದಾರೆ(ಏಜೆನ್ಸೀಸ್​).