ನ್ಯೂಸ್

ಆರ್​ಜಿವಿ ಬತ್ತಳಿಕೆಯಿಂದ ಕರೊನಾ ವೈರಸ್​ ಸಿನಿಮಾ; ಟ್ರೇಲರ್​ ಬಂದೇ ಬಿಟ್ಟಿದೆ ನೋಡಿ!

ಸಿನಿಮಾ ನಿರ್ಮಾಣದ ಫ್ಯಾಕ್ಟರಿ ಎಂದೇ ರಾಮ್​ಗೋಪಾಲ್​ ವರ್ಮಾ ಅವರನ್ನು ಎಲ್ಲರು ಕರೆಯುವುದುಂಟು. ಪ್ರಸ್ತುತತೆಗೆ ಅದೆಷ್ಟು ಹತ್ತಿರ ಅಂದರೆ, ಯಾವುದೇ ಘಟನೆ ನಡೆದರೆ ಅದಕ್ಕೆ ಸಂಬಂಧಿಸಿದ ಸಿನಿಮಾ ಅವರ ಬತ್ತಳಿಕೆಯಲ್ಲಿ ಸಿದ್ಧವಾಗುತ್ತಿದೆ ಎಂದೇ ಅರ್ಥ. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ, ಲಾಕ್​ಡೌನ್​ ಹೊತ್ತಲ್ಲೇ ‘ಕರೊನಾ ವೈರಸ್​’ ಶೀರ್ಷಿಕೆಯ ಸಿನಿಮಾ ಮಾಡಿದ್ದಾರೆ. ಅದರ ಟ್ರೇಲರ್​ ಸಹ ಬಿಡುಗಡೆಯಾಗಿದ್ದು, ಬಾಲಿವುಡ್​ ಬಿಗ್​ ಅಮಿತಾಬ್ ಬಚ್ಚನ್​ ಸೇರಿ ಹಲವರು ಆರ್​ಜಿವಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮೊದ ಮೊದಲಿಗೆ ಟ್ರೇಲರ್​ ನೋಡಿದಾಗ ಇದು ಹಾರರ್​ ಸಿನಿಮಾನಾ ಎಂದು ಅನಿಸದೆ ಇರದು. ಆ ಅನುಮಾನಕ್ಕೂ ಉತ್ತರಿಸಿರುವ ಆರ್​ಜಿವಿ, ‘ಕರೊನಾ ವೈರಸ್​ ಇದು ಹಾರರ್ ಸಿನಿಮಾ ಅಲ್ಲ ಬದಲಿಗೆ ಇದು ಬೇರೆ ರೀತಿಯಲ್ಲಿಯೇ ಹೆದರಿಸಲಿದೆ’ ಎಂದಿದ್ದಾರೆ. ಕರೊನಾ ರೋಗಲಕ್ಷಣವಾದ ಕೆಮ್ಮನ್ನೇ ಪ್ರಧಾನವಾಗಿಟ್ಟುಕೊಂಡು ಟ್ರೇಲರ್​ ಬಿಡುಗಡೆ ಮಾಡಿದ್ದಾರೆ. ಒಂದು ಕೆಮ್ಮು ಇಡೀ ಕುಟುಂಬದವರನ್ನು ಹೇಗೆಲ್ಲ ಭಯಬೀಳಿಸುತ್ತದೆ ಎಂಬುದು ಟ್ರೇಲರ್​ನಲ್ಲಿದೆ.

ಲಾಕ್​ಡೌನ್ ಹೊತ್ತಲ್ಲಿ ಶೂಟಿಂಗ್​ ಮಾಡಿದ ಬಗೆಯನ್ನೂ ಆರ್​ಜಿವಿ ಹೇಳಿಕೊಂಡಿದ್ದಾರೆ. ‘ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡೇ ಈ ಸಿನಿಮಾ ಶೂಟಿಂಗ್ ಮಾಡುತ್ತಿದ್ದೇವೆ. ಜೀಸಸ್​, ಈಶ್ವರ್​, ಅಲ್ಲಾ ಮತ್ತು ಸರ್ಕಾರದ ಮೇಲೆ ಆಣೆಗೂ’ ಎಂದಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. (ಏಜೆನ್ಸೀಸ್​)