ನ್ಯೂಸ್

ರಾಖಿ ಸಾವಂತ್‌ಗೆ ಮಹಾರಾಷ್ಟ್ರ ಸೈಬರ್ ಸೆಲ್​ನಿಂದ ಸಮನ್ಸ್ ಜಾರಿ; ಕಾರಣ ಹೀಗಿದೆ.. | Rakhi Sawant

ಮುಂಬೈ: ಇಂಡಿಯಾ ಗಾಟ್​​ ಲ್ಯಾಟೆಂಟ್​ ಕಾರ್ಯಕ್ರಮದಲ್ಲಿ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 27ರಂದು ಮಹಾರಾಷ್ಟ್ರ ಸೈಬರ್ ಸೆಲ್ ಮುಂದೆ ಹಾಜರಾಗುವಂತೆ ನಟಿ ರಾಖಿ ಸಾವಂತ್​ಗೆ(Rakhi Sawant) ಸಮನ್ಸ್ ಜಾರಿ ಮಾಡಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ರಣವೀರ್ ಅಲ್ಲಾಬಾಡಿಯಾ ಕಾಣಿಸಿಕೊಂಡ ಸಂಚಿಕೆಯಲ್ಲಿ ರಾಖಿ ಸಾವಂತ್ ಪ್ಯಾನೆಲಿಸ್ಟ್ ಆಗಿರಲಿಲ್ಲ. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್​ ಸಮಯ್ ರೈನಾ ಅವರ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ರಾಖಿ ಸಾವಂತ್ ಈ ಹಿಂದೆ ಅತಿಥಿಯಾಗಿ ಭಾಗವಹಿಸಿದ್ದರು.

ಆಶಿಶ್ ಚಂಚಲಾನಿ ಮತ್ತು ರಣವೀರ್ ಅಲ್ಲಾಬಾಡಿಯಾ ಅವರಿಗೆ ಫೆಬ್ರವರಿ 24ರಂದು ಹೇಳಿಕೆಗಳನ್ನು ದಾಖಲಿಸಲು ಮಹಾರಾಷ್ಟ್ರ ಸೈಬರ್ ಸೆಲ್ ಸೂಚಿಸಿದೆ. ಸ್ಟ್ಯಾಂಡ್-ಅಪ್ ಕಾಮಿಡಿಯನ್​ ಸಮಯ್ ರೈನಾ ಅವರಿಗೆ ಹೇಳಿಕೆ ದಾಖಲಿಸಲು ಈ ಮೊದಲು ಪೊಲೀಸರು ಮಾರ್ಚ್ 10ರವರೆಗೆ ಗಡುವು ನೀಡಿದ್ದರು. ಇದಾದ ನಂತರ ಸಮಯ್ ರೈನಾ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಪೊಲೀಸರಿಗೆ ಮಾಡಿದ ಮನವಿಯಲ್ಲಿ ಸಮಯ್​ ರೈನಾ ಅವರು ವೇಳಾಪಟ್ಟಿಯ ಕಾರಣದಿಂದಾಗಿ ಮಾರ್ಚ್ 17ರ ಮೊದಲು ಭಾರತಕ್ಕೆ ಮರಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಹೇಳಿಕೆ ದಾಖಲಿಸಲು ಅನುಮತಿ ನೀಡಿ ಎಂದು ಕೋರಿದ್ದರು. ಆದರೆ ಮಹಾರಾಷ್ಟ್ರ ಸೈಬರ್ ಸೆಲ್ ಅವರ ಮನವಿಯನ್ನು ತಿರಸ್ಕರಿಸಿತ್ತು.

ಸಂಪೂರ್ಣ ವಿವಾದವನ್ನು ಮಹಾರಾಷ್ಟ್ರ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ. ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿ ಯಶಸ್ವಿ ಯಾದವ್ ದೃಢಪಡಿಸಿದ್ದಾರೆ. ಕಾರ್ಯಕ್ರಮದ ಎಲ್ಲಾ ಸಂಚಿಕೆಗಳಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯಲ್ಲಿರುವ ಎಲ್ಲಾ ವಿಡಿಯೋಗಳನ್ನು ಡಿಲೀಟ್​ ಮಾಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​​)