ನ್ಯೂಸ್

ರಾಜ್ಯಸಭೆ ಚುನಾವಣೆ: ಬಿಜೆಪಿ ತ್ರಿವಿಕ್ರಮ, ಕೈಗೆ ಒಂದೇ, ಜೆಡಿಎಸ್​ಗೆ ಸೊನ್ನೆ...

ಬೆಂಗಳೂರು: ಪೈಪೋಟಿಯ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಆಡಳಿತ ಬಿಜೆಪಿಗೆ ತ್ರಿಬಲ್ ಧಮಾಕಾ ಲಭಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಜೆಡಿಎಸ್ ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಮಡುವಿಗೆ ಬಿದ್ದಿದೆ.

ತಲಾ 46 ಮೊದಲ ಪ್ರಾಶಸ್ತ್ಯ ಮತಗಳಿಸಿದ ಬಿಜೆಪಿಯ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನ ಜೈರಾಮ್ ರಮೇಶ್ ಆಯ್ಕೆಯಾಗಿದ್ದಾರೆ ಎಂದು ಮೊದಲಿಗೆ ಘೋಷಿಸಲಾಯಿತು. ಬಿಜೆಪಿಯ ಜಗ್ಗೇಶ್ ಅವರು 44 ಮೊದಲ ಪ್ರಾಶಸ್ತ್ಯ ಗಳಿಸಿದ್ದರು. ಗೆಲುವಿಗೆ ನಿಗದಿತ ಮತ ಮೌಲ್ಯವನ್ನು ಗಳಿಸಲು ಎರಡನೇ ಪ್ರಾಶಸ್ತ್ಯದ ನೆರವಾದವು. ಮೂರನೇಯವರಾಗಿ ಜಗ್ಗೇಶ್ ಆಯ್ಕೆಯಾದರೆ, ನಾಲ್ಕನೇ ಸ್ಥಾನಕ್ಕೆ ಹಣಾಹಣಿ ಏರ್ಪಟ್ಟಿತು.

ಅಂತಿಮವಾಗಿ ಕಣದಲ್ಲಿ ಉಳಿದ ಬಿಜೆಪಿಯ ಲೆಹರ್‌ಸಿಂಗ್ 33 ಮೊದಲ ಪ್ರಾಶಸ್ತ್ಯ ಮತಗಳೊಂದಿಗೆ ಮುನ್ನಡೆ ಸಾಧಿಸಿದರೆ, ಜೆಡಿಎಸ್‌ನ ಕುಪೇಂದ್ರರೆಡ್ಡಿ 30 ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿಖಾನ್ 25 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಗಳಿಸಿದರು.

ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯೊಂದಿಗೆ ಎಲಿಮಿನೇಷನ್ ಸುತ್ತಿನಲ್ಲಿ ಮುಂಚೂಣಿಯಲ್ಲಿದ್ದ ಲೆಹರ್ ಸಿಂಗ್‌ಗೆ ಮತಗಳು ವರ್ಗಾವಣೆಯಾಗಿದ್ದರಿಂದ ಆಯ್ಕೆಯಾದರು.

ವಿಧಾನಸೌಧದಲ್ಲಿ ಶುಕ್ರವಾರ ಮತದಾನದ ಬಳಿಕ ಎಣಿಕೆ ನಡೆದು, ಚುನಾವಣಾಧಿಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಅಧಿಕೃತವಾಗಿ ಲಿತಾಂಶ ಪ್ರಕಟಿಸಿದರು.

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಗೆ ಆರು ಉಮೇದುವಾರರ ಸೆಣಸು ಗಮನಸೆಳೆದಿತ್ತು. ಅಲ್ಲದೆ, ಮತದಾನದ ಮೂಲಕ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಒಗ್ಗಟ್ಟಿನ ಬಲದಿಂದ ಬಿಜೆಪಿಯ ಮೂವರೂ ಅಭ್ಯರ್ಥಿಗಳು ಗೆದ್ದಿದ್ದಾರೆ. ರಾಜ್ಯದ ಜನತೆಗೆ ಕಾಂಗ್ರೆಸ್, ಜೆಡಿಎಸ್‌ನ ಬೀದಿ ಜಗಳ ಗೊತ್ತಾಗಿದೆ. ರಾಜಕೀಯ ಧ್ರುವೀಕರಣ ಪ್ರಾರಂಭವಾಗಲಿದೆ. | ಆರ್.ಅಶೋಕ್ ಕಂದಾಯ ಸಚಿವ.

ಎಣಿಕೆಗೆ ಎರಡು ತಾಸು ವಿಳಂಬ: ಮತದಾನದ ಅವಧಿ ಸಂಜೆ 4ರವರೆಗೆ ನಿಗದಿಯಾಗಿದ್ದರೂ ವಿಧಾನಸಭೆಯ 224 ಸದಸ್ಯರು ಮಧ್ಯಾಹ್ನ 2.15ರ ವೇಳೆಗೆ ತಮ್ಮ ಹಕ್ಕು ಚಲಾಯಿಸಿಯಾಗಿತ್ತು. ವೇಳಾಪಟ್ಟಿ ಪ್ರಕಾರ ಸಂಜೆ ಐದರಿಂದ ಮತ ಎಣಿಕೆ ಕಾರ್ಯ ಶುರುವಾಗಬೇಕಿತ್ತು. ಆದರೆ ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರ ಮತಪತ್ರದ ದೂರು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗವು ಎಣಿಕೆ ಕಾರ್ಯ ಮುಂದುವರಿಸಲು ನಿರ್ದೇಶಿಸಿದಾಗ ರಾತ್ರಿ 7 ಸಮೀಪಿಸಿತ್ತು.

ಹೆಬ್ಬೆಟ್ಟಿನಿಂದ ಮತ ಮರೆಮಾಚಿದ ‘ಗುಬ್ಬಿ’!

ಯಾರಿಗೆ ಮತ ಹಾಕಿದ್ದೇನೆಂದು ಪಕ್ಷದ ಚುನಾವಣಾ ಏಜೆಂಟರಿಗೆ ತೋರಿಸಿಯೇ ಮತ ಹಾಕಬೇಕೆಂದಿದ್ದರೂ ಜೆಡಿಎಸ್‌ನ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ (ವಾಸು) ಅವರು ಬಿಜೆಪಿಯ ಲೆಹರ್ ಸಿಂಗ್ ಗೆ ಮತ ಹಾಕಿರುವುದು ಎಣಿಕೆ ನಂತರ ಬಯಲಾಯಿತು.

ಅಚ್ಚರಿಯೆಂದರೆ ಮತಪತ್ರ ಪೆಟ್ಟಿಗೆಗೆ ಹಾಕುವ ಮುನ್ನ ತಮ್ಮ ಪಕ್ಷದ ಏಜೆಂಟರಿಗೆ ತೋರಿಸುವಾಗ ಹೆಬ್ಬೆಟ್ಟಿನಿಂದ ಮರೆಮಾಚಿ ಖಾಲಿ ಮತಪತ್ರ ಹಾಕಿದ್ದೇನೆ ಎಂಬ ಬಿಂಬಿಸಿ, ಜೆಡಿಎಸ್ ನಾಯಕರಿಗೆ ಯಾಮಾರಿಸಿದ್ದಾರೆ. ಸತ್ಯಾಂಶ ತಿಳಿದ ನಂತರ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಸಿಹಿ ಹಂಚಿ ಸಂಭ್ರಮ: ಮೊದಲು ವಿಜೇತರಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸನ್ಮಾನ ಸ್ವೀಕರಿಸುವ ಜತೆಗೆ ತಾವೇ ಮುಂದೆ ನಿಂತು ಸಿಹಿ ಹಂಚಿ ಎಲ್ಲರ ಸಂಭ್ರಮದಲ್ಲಿ ಭಾಗಿಯಾದರು. ಎರಡನೇಯವರಾಗಿ ನಟ ಜಗ್ಗೇಶ್ ಜಯಶಾಲಿಯಾದರೆ, ಬಯಸದೆ ಬಂದ ಭಾಗ್ಯವೆಂಬಂತೆ ಗೆಲುವಿನ ದಡ ಸೇರಿದ ಲೆಹರ್ ಸಿಂಗ್ ಸಿರೋಯಿ ಈ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸಹೋದ್ಯೋಗಿಗಳು, ಪಕ್ಷದ ಹಿರಿಯ ನಾಯಕರು ಆನಂದೋತ್ಸಾಹದಲ್ಲಿ ಮುಳುಗೆದ್ದರು.