ಶ್ರೀನಗರ: ಪಾಕಿಸ್ತಾನವು ನವದೆಹಲಿಯೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರೆ, ಬೇಲ್ಔಟ್ ಪ್ಯಾಕೇಜ್ ಅಡಿಯಲ್ಲಿ ಇಸ್ಲಾಮಾಬಾದ್ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಕೇಳಿದ್ದಕ್ಕಿಂತ ದೊಡ್ಡ ಆರ್ಥಿಕ ಪ್ಯಾಕೇಜ್ ಅನ್ನು ಭಾರತ ನೀಡುತ್ತಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಹೇಳಿದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಭಾನುವಾರ ಬಂಡಿಪೋರಾ ಜಿಲ್ಲೆಯ ಗುರೇಜ್ ಅಸೆಂಬ್ಲಿ ವಿಭಾಗದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದರು.
"ನಾವು ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನೆರೆಹೊರೆಯವರನ್ನಲ್ಲ" ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಜನಾಥ್, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಹಣ ವ್ಯಯಿಸುತ್ತಿದ್ದರೆ, ಪಾಕಿಸ್ತಾನವು ದೀರ್ಘಕಾಲದಿಂದ ಹಣಕಾಸಿನ ನೆರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕ ಕಾರ್ಖಾನೆ ನಡೆಸಲು ಇತರ ದೇಶಗಳಿಂದ ಹಣ ಕೇಳುತ್ತಿದೆ ಎಂದು ಅವರು ಟೀಕಿಸಿದರು.