ನ್ಯೂಸ್

'ವಿಕ್ರಂ' ದಾಖಲೆಯನ್ನು ಮುರಿದ 'ಜೈಲರ್'​; ಒಟ್ಟು ಗಳಿಕೆ ಎಷ್ಟು?

ಮೋಹನ್​ ಶೆಟ್ಟಿ

ತಮಿಳುನಾಡು: ಕಾಲಿವುಡ್​ ಸೂಪರ್​​ಸ್ಟಾರ್​, ತಲೈವಾ ರಜನಿಕಾಂತ್​ ಅಭಿನಯದ 'ಜೈಲರ್' ಬಿಡುಗಡೆಗೊಂಡ ದಿನದಿಂದಲೂ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ಕಮಲ್​ ಹಾಸನ್​ ಅವರ 'ವಿಕ್ರಂ' ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಇದೀಗ ಜೈಲರ್​ ಬ್ರೇಕ್​ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಇತ್ತೀಚಿನ ಪ್ಯಾನ್ ಇಂಡಿಯಾ ಚಿತ್ರ 'ಜೈಲರ್'​ ಆಗಸ್ಟ್ 10, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರಿಂದ ಪಾತ್ರದ ಬಗ್ಗೆ ವ್ಯಾಪಕ ಪ್ರಶಂಸೆ ಜತೆ ಉತ್ತಮ ವಿಮರ್ಶೆಗಳನ್ನು ಪಡೆದುಕೊಳ್ಳುವ ಮುಖೇನ ಕೆಲವೇ ದಿನಗಳಲ್ಲಿ ಚಿತ್ರವು ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಸದ್ಯದ ವರದಿ ಪ್ರಕಾರ, ತಲೈವಾ ನಟನೆಯ ಸಿನಿಮಾವು ಈ ಹಿಂದಿನ ಹಲವು ದಾಖಲೆಗಳನ್ನು ಮುರಿದಿದ್ದು, ಬಿಡುಗಡೆಗೊಂಡ ಕೇವಲ 6 ದಿನಗಳಲ್ಲಿ 416 ಕೋಟಿ ರೂ.ಗಳ ಗಳಿಕೆಯನ್ನು ಕಂಡಿದೆ.

ಈ ಮೂಲಕ ಕಳೆದ ವರ್ಷ ಬಿಡುಗಡೆಯಾದ ಕಮಲ್ ಹಾಸನ್ ಅವರ 'ವಿಕ್ರಂ' ಚಿತ್ರ ಗಳಿಸಿದ್ದ 410 ಕೋಟಿ ರೂ. ದಾಖಲೆಯನ್ನು ಇದೀಗ ಬ್ರೇಕ್ ಮಾಡಿದೆ. ಸದ್ಯ ಸೂಪರ್​ಸ್ಟಾರ್​​ ಸಿನಿಮಾ ಹಳೆಯ ರೆಕಾರ್ಡ್​ಗಳನ್ನು ಮುರಿದು, ಭರ್ಜರಿ ಪ್ರದರ್ಶನ ಕಾಣುವತ್ತ ಮುನ್ನುಗ್ಗುತ್ತಿದೆ. 'ಜೈಲರ್'​ ಚಿತ್ರ ವೀಕ್ಷಿಸಲು ರಜನಿಕಾಂತ್​ ಅವರ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖಮಾಡುತ್ತಿದ್ದು, ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವಿನಾಯಕನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಮೋಹನ್ ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ಮಿರ್ನಾ ಮೆನನ್, ಸುನಿಲ್ ಮತ್ತು ಯೋಗಿ ಬಾಬು ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಅನಿರುದ್ಧ್​ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).