ನ್ಯೂಸ್

BiggBoss ಮನೆಯಲ್ಲಿ ಎಲ್ಲಾ ಅದಲು-ಬದಲು; ರಜತ್​ ಕಾಟಕ್ಕೆ ಹೈರಾಣಾದ ಚೈತ್ರಾ ಟೀಮ್​

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಶುರುವಾಗಿ 12ಕ್ಕೂ ಅಧಿಕ ವಾರಗಳು ಕಳೆದಿದ್ದು, ದಿನ ಕಳೆದಂತೆ ಶೋ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೂ ಟಾಸ್ಕ್​ನ ವಿಚಾರಕ್ಕೆ ಬರುವುದಾದರೆ ಸ್ಫರ್ಧಿಗಳು ನಾ ಮುಂದು, ತಾ ಮುಂದು ಎಂಬಂತೆ ಪ್ರದರ್ಶನವನ್ನು ನೀಡುತ್ತಿದ್ದು, ಈ ವಾರದ ಟಾಸ್ಕ್​ ಕೂಡ ಅದೇ ರೀತಿ ಇರಲಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ಮಾತ್ರ ತಾರಕಕ್ಕೇರಿದೆ.

ಈ ವಾರದ ಟಾಸ್ಕ್​ ವಿಚಾರಕ್ಕೆ ಬರುವುದಾದರೆ ಬಿಗ್​ಬಾಸ್​ (BiggBoss) ಮನೆಯನ್ನು ರೆಸಾರ್ಟ್​ (Resort) ಆಗಿ ಪರಿವರ್ತಿಸಲಾಗಿದ್ದು, ಸಿಬ್ಬಂದಿ ಹಾಗೂ ಆತಿಥಿಗಳಾಗಿ ಎರಡು ತಂಡಗಳಾಗಿ ಮಾಡಲಾಗಿದೆ. ಅದರಂತೆ ಮೊದಲ ದಿನದ ಟಾಸ್ಕ್​ನಲ್ಲಿ ಭವ್ಯಾ ತಂಡವು ರೆಸಾರ್ಟ್​ ಸಿಬ್ಬಂದಿಯಾಗಿ ಆಟವಾಡಿದರೆ, ಚೈತ್ರಾ ಅವರ ತಂಡ ಅತಿಥಿಗಳಾಗಿ ಭಾಗಿಯಾಗಿತ್ತು. ಎರಡನೇ ದಿನದ ಟಾಸ್ಕ್​ನಲ್ಲಿ ಬದಲಾವಣೆ ಮಾಡಲಾಗಿದ್ದು, ಅದರಂತೆ ಚೈತ್ರಾ ಅವರ ತಂಡವು ರೆಸಾರ್ಟ್​ ಸಿಬ್ಬಂದಿಯಾದರೆ, ಭವ್ಯಾ ಅವರ ತಂಡವು ರೆಸಾರ್ಟ್​ಗೆ ಆಗಮಿಸಿರುವ ಅತಿಥಿಗಳಾಗಿದ್ದಾರೆ. ಈ ಟಾಸ್ಕ್​ಗೆ ಸಂಬಂಧಿಸಿದ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಖಾತ್ರಿಯಾಗಿದೆ.

ಈಗ ಆಟ ಬದಲಾಗಿದೆ! ಶೀರ್ಷಿಕೆಯಡಿ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಈ ವಿಡಿಯೋ ನೋಡುವುದಾದರೆ ರಜತ್ ಹಾಗೂ ತ್ರಿವಿಕ್ರಮ್ ಕಿತ್ತಾಡಿಕೊಂಡು ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಾರೆ. ಬಳಿಕ ಧನರಾಜ್​ Frustration ಎಂದು ಕೂಗಾಡುತ್ತ ರೂಮಿನಲ್ಲಿರುವ ಬೆಡ್​​ಶೀಟ್​ಗಳನ್ನು ತೆಗೆದು ನೆಲಕ್ಕೆ ಎಸೆಯುತ್ತಾರೆ. ಬಳಿಕ ರಜತ್​ ಗೌತಮಿಗೆ ಪಾಸಿಟಿವ್​ ಬದಲು ನಿಮ್ಮ ಜೀವನದಲ್ಲಿ ನೆಗಟಿವ್ ಇರಬೇಕೆಂದು ಹೇಳುತ್ತಾರೆ. ಬಳಿಕ ಬಾತ್​ರೂಮಿನಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಿ ಭವ್ಯಾ ತಂಡದ ಸದಸ್ಯರು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಈ ಪ್ರೋಮೋ ಸದ್ಯ ವೈರಲ್​ ಆಗಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.