ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತಎಣಿಕೆ ಅಂತಿಮ ಹಂತಕ್ಕೆ ಬಂದಿದ್ದು, ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿ, ಅಧಿಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಸದ್ಯದ ಟ್ರೆಂಡ್ ಪ್ರಕಾರ ಒಟ್ಟು 199 ಸ್ಥಾನಗಳಲ್ಲಿ 115 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಇದರ ನಡುವೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
ಬಿಜೆಪಿ ರಾಜಸ್ಥಾನದಲ್ಲಿ ಬಹುದೊಡ್ಡ ಗೆಲುವು ಸಾಧಿಸುವ ಹಂತಕ್ಕೆ ಬಂದಿದ್ದರೂ ರಾಜಸ್ಥಾನ ಬಿಜೆಪಿಯ ಏಕ ಮಾತ್ರ ಬಿಗ್ ಲೀಡರ್ ವಸುಂಧರಾ ರಾಜೆ ಅವರು ಮೌನಕ್ಕೆ ಶರಣಾಗಿದ್ದು, ಇದು ಬಹಳ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ನಿಗೂಢತೆಯನ್ನು ಹುಟ್ಟುಹಾಕಿದೆ. ವಸುಂಧಾರಾ ಅವರು ಮತ್ತೊಮ್ಮೆ ಉನ್ನತ ಸ್ಥಾನ ಪಡೆಯಲಿದ್ದಾರಾ ಎಂಬ ಕುತೂಹಲ ಗರಿಗೆದರಿದೆ. ತಾವು ಕಣಕ್ಕಿಳಿದ ಝಲ್ರಪಟಾನ್ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಗೆಲುವು ದಾಖಲಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಪ್ರಧಾನಿ ಮೋದಿ ಮತ್ತು ಜೆಪಿ ನಡ್ಡಾ ಅವರನ್ನು ಹೊಗಳಿದರು.
ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿತರ ಸಂಖ್ಯೆ ದೊಡ್ಡದಾಗಿದೆ. ವಸುಂಧಾರಾ ರಾಜೆ ಹೊರತುಪಡಿಸಿ, ಕೇಂದ್ರ ಸಚಿವ ಗಜೇಂಧ್ರ ಶೇಖಾವತ್, ಸತೀಶ್ ಪೂನಿಯಾ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, ವಸುಂಧರಾ ರಾಜೆ ಸೋದರ ಸಂಬಂಧಿ ದಿಯಾ ಕುಮಾರಿ ಹಾಗೂ ಬಾಬಾ ಬಾಲಕ್ ನಾಥ್ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಸಿಪಿ ಜೋಶಿ ಮತ್ತು ಸತೀಶ್ ಪೂನಿಯಾ ಇಬ್ಬರೂ ಚುನಾವಣಾ ಯುದ್ಧದಲ್ಲಿ ಸೋತಿದ್ದು, ಸಿಎಂ ಸ್ಥಾನದ ಆಸೆಯನ್ನು ಕೈಬಿಡಬೇಕಾಗಿದೆ.
ಈ ಬಾರಿ ವಸುಂಧರಾ ರಾಜೆ ಅವರಿಗೆ ಸಿಎಂ ಸ್ಥಾನ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಹೊಸ ಮುಖಕ್ಕೆ ಮಣೆ ಹಾಕುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದು, ಈ ವಿಚಾರ ರಾಜಸ್ಥಾನದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ 70 ವರ್ಷದ ರಾಜೆ ಅವರು ದೇವಸ್ಥಾನಗಳಿಗೆ ರೌಂಡ್ ಹೊಡೆಯುತ್ತಿದ್ದಾರೆ.
ಚುನಾವಣೆ ಗೆಲುವಿನ ಕುರಿತು ಮಾತನಾಡಿದ ರಾಜೆ, ಇದು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ (ಎಲ್ಲರಿಗೂ ಅಭಿವೃದ್ಧಿ) ಮಂತ್ರ, ಅಮಿತ್ ಷಾ ಅವರ ತಂತ್ರ ಮತ್ತು ಜೆಪಿ ನಡ್ಡಾ ಅವರ ನಾಯಕತ್ವ, ನಮ್ಮ ಪಕ್ಷದ ಕಾರ್ಯಕರ್ತರ ಶ್ರಮ ಮತ್ತು ಜನರ ಇಚ್ಛೆಯ ಗೆಲುವಾಗಿದೆ. ಪ್ರಧಾನಿಗೆ ಮತ್ತೊಮ್ಮೆ ಸೇವೆ ಸಲ್ಲಿಸಲು ನಾವು ಅವಕಾಶ ನೀಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದೀಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆಯನ್ನು ರಾಜಸ್ಥಾನದ ಬಿಜೆಪಿ ವಲಯದಲ್ಲಿ ಯಾರನ್ನೇ ಕೇಳಿದರ ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತದೆ ಎಂಬ ಒಂದೇ ಒಂದು ಉತ್ತರ ಮಾತ್ರ ಹೊರಬರುತ್ತಿದೆ. ಹೀಗಾಗಿ ಈ ಕುತೂಹಲ ಹಾಗೇ ಉಳಿದುಕೊಂಡಿದೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮೌನಕ್ಕೆ ಜಾರಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
4.30ರ ಮತಎಣಿಕೆಯ ಟ್ರೆಂಡ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 70, ಬಿಎಸ್ಪಿ 2 ಮತ್ತು ಪಕ್ಷೇತರರು 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸರ್ಕಾರ ರಚನೆಗೆ 100 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಬೇಕಿದ್ದು, 115 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ, ಅಧಿಕಾರ ರಚಿಸುವುದು ಖಚಿತವಾಗಿದೆ. (ಏಜೆನ್ಸೀಸ್)