ನ್ಯೂಸ್

ಬಿಹಾರದ ಮಾದರಿಯಲ್ಲೇ ರಾಜಸ್ಥಾನದಲ್ಲೂ ಜಾತಿಗಣತಿ ನಡೆಸಲಾಗುವುದು: ಸಿಎಂ ಅಶೋಕ್ ಗೆಹ್ಲೋಟ್

ಜೈಪುರ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನವಾಣೆ ನಡೆಯಲಿರುವ ರಾಜಸ್ಥಾನದಲ್ಲಿ ಬಿಹಾರದ ಮಾದರಿಯಲ್ಲೇ ಜಾತಿ ಗಣತಿ ನಡೆಸುವುದಾಗಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಘೋಷಿಸಿದ್ದಾರೆ.

ಶುಕ್ರವಾರ ಸಂಜೆ ಜೈಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಲಾಗಿದ್ದು, ಪ್ರಮುಖ ನಾಯಕರು ಜಾತಿ ಗಣತಿ ವಿಚಾರಚಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಸುದ್ದಿಮೂಲಗಳು ತಿಳಿಸಿವೆ.

ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಹಾರದ ಮಾದರಿಯಲ್ಲೇ ರಾಜಸ್ಥಾನ ಸರ್ಕಾರದ ವತಿಯಿಂದ ಜಾತಿ ಗಣತಿ ನಡೆಸಲಾಗುವುದು. ರಾಹುಲ್ ಗಾಂಧಿ ಅವರ ಪರಿಕಲ್ಪನೆಯಂತೆ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ವತಿಯಿಂದ ಜಾತಿ ಗಣತಿ ನಡೆಸಲಾಗುವುದು. ಹೀಗಾಗಿ ಪಕ್ಷದ ವರಿಷ್ಠರು ನೀಡಿರುವ ಆದೇಶದ ಮೇರೆಗೆ ರಾಜಸ್ಥಾನದಲ್ಲಿ ನಾವು ಸರ್ಕಾರದ ವತಿಯಿಂದ ಜಾತಿ ಗಣತಿ ನಡೆಸಲು ನಿರ್ಧರಿಸಿದ್ದೇವೆ.

ದೇಶದೊಳಗೆ ವಿವಿಧ ಧರ್ಮ ಹಾಗೂ ಜಾತಿಯ ಜನ ವಾಸಿಸುತ್ತಿದ್ದಾರೆ. ಯಾವ ಜಾತಿಯ ಜನಸಂಖ್ಯೆ ಎಷ್ಟಿದೆ ಎಂದು ತಿಳಿದರೆ ಸರ್ಕಾರದ ವತಿಯಿಂದ ಅವರಿಗೆಲ್ಲಾ ಯಾವ ರೀತಿಯ ಯೋಜನೆಗಳನ್ನು ರೂಪಿಸಬಹುದು ಎಂಬ ವಿಚಾರವನ್ನು ತಿಳಿಯಬಹುದು. ಒಂದು ವೇಳೆ ಗಣತಿ ನಡೆಸಿದರೆ ಜಾತಿವಾರು ಯೋಜನೆಗಳನ್ನು ಸಿದ್ದಪಡಿಸಿ ಜಾರಿ ಮಾಡುವುದಕ್ಕೆ ನಮಗೆ ಸಹಾಯ ಮಾಡುತ್ತದೆ.

ಜಾತಿಗಣತಿಯನ್ನು ಹೊರತುಪಡಿಸಿದರೆ ಅಭಿವೃದ್ದಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಈ ಸಂಬಂಧ ಸೋಮವಾರ ಪುನಃ ಸಭೆ ಕರೆಯಲಾಗಿದ್ದು, ಅಂತಿಮ ರೂಪುರೇಷೆಯನ್ನು ಸಿದ್ದಪಡಿಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಹಿತಿ ನೀಡಿದ್ಧಾರೆ.