ಜೈಪುರ: ಪಾಕಿಸ್ತಾನದ ಯುವತಿಯನ್ನು ಮದುವೆ ಆಗುವುದಕ್ಕಾಗಿ ಕುವೈತ್‌ನಿಂದ ಫೋನ್ ಮೂಲಕವೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ರಾಜಸ್ಥಾನ ಮೂಲದ 35 ವರ್ಷದ ವ್ಯಕ್ತಿಯನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ರೆಹಮಾನ್ ಎಂದು ಗುರುತಿಸಲಾಗಿದೆ. ಈತನಿಗೆ ಸಾಮಾಜಿಕ ಜಾಲತಾಣ ಮೂಲಕ ಪಾಕಿಸ್ತಾನ ಮೂಲದ ಮೆಹ್ವಿಶ್ ಎಂಬಾಕೆಯ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ, ಸೌದಿ ಅರೇಬಿಯಾದಲ್ಲಿ ಇಬ್ಬರು ಮದುವೆ ಆಗಿದ್ದರು. ಆಕೆ ಪ್ರವಾಸಿ ವೀಸಾದಲ್ಲಿ ಕಳೆದ ತಿಂಗಳಷ್ಟೇ ರಾಜಸ್ಥಾನದ ಚುರುಗೆ ಆಗಮಿಸಿದ್ದಳು.
ಇದರ ನಡುವೆ ಹನುಮಾನ್‌ಗಢದ ಭದ್ರಾ ಮೂಲದ ರೆಹಮಾನ್ ಪತ್ನಿ ಫರೀದಾ ಬಾನೋ ತನ್ನ ಗಂಡ ಹಾಗೂ ಮೆಹ್ವಿಶ್ ವಿರುದ್ಧ ದೂರು ದಾಖಲಿಸಿದ್ದರು. ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ತ್ರಿವಳಿ ತಲಾಖ್ ಮೂಲಕ ಡಿವೋರ್ಸ್ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಸಿದ್ದರು ಎಂದು ಹನುಮಾನ್‌ಗಢದ ಡೆಪ್ಯುಟಿ ಎಸ್ಪಿ (ಎಸ್ಸಿ/ಎಸ್ಟಿ ಸೆಲ್) ರಣವೀರ್ ಸಿಂಗ್ ಹೇಳಿದ್ದಾರೆ.
ಸೋಮವಾರ ಕುವೈತ್‌ನಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ರೆಹಮಾನ್ನನ್ನು ಹನುಮಾನ್‌ಗಢದ ಪೊಲೀಸರು ಬಂಧಿಸಿದರು. ಬಳಿಕ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಪ್ರಾಥಮಿಕ ವಿಚಾರಣೆ ನಡೆಸಿದ ಮರುದಿನ ಆತನನ್ನು ಬಂಧಿಸಲಾಯಿತು ಎಂದು ಸಿಂಗ್ ತಿಳಿಸಿದರು.
ಅಂದಹಾಗೆ ರೆಹಮಾನ್ ಮತ್ತು ಫರೀದಾ ಬಾನೊ 2011 ರಲ್ಲಿ ವಿವಾಹವಾದರು. ದಂಪತಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ರೆಹಮಾನ್ ಜೀವನೋಪಾಯಕ್ಕಾಗಿ ಕುವೈತ್‌ಗೆ ಹೋಗಿ ಅಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದನು. ಪಾಕಿಸ್ತಾನದ ಮೆಹ್ವಿಶ್, ಚುರುಗೆ ಬಂದ ನಂತರ, ಹನುಮಾನ್‌ಗಢದಲ್ಲಿ ತನ್ನ ಪಾಲಕರೊಂದಿಗೆ ವಾಸಿಸುತ್ತಿದ್ದ ಫರೀದಾ ಬಾನೊ ರೆಹಮಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಡಿಎಸ್‌ಪಿ ಸಿಂಗ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)