ನ್ಯೂಸ್

ರಾಜ್ ಠಾಕ್ರೆ ಭಾಷಣ ಕೇಳಿ ಡ್ಯಾನ್ಸ್ ಬಾರ್ ಧ್ವಂಸಗೊಳಿಸಿದ MNS ಕಾರ್ಯಕರ್ತರು!| Raj Thackeray

Raj Thackeray: ಮಹಾರಾಷ್ಟ್ರದ ರಾಯಗಢದಲ್ಲಿ ನಿನ್ನೆ ಸಂಜೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಮಾಡಿದ್ದ ಉದ್ರಿಕ್ತ ಭಾಷಣ ಕೇಳಿದ ಕಾರ್ಯಕರ್ತರು, ತಡರಾತ್ರಿ ಮುಂಬೈ ಬಳಿಯ ಪನ್ವೇಲ್​ನಲ್ಲಿರುವ ಡ್ಯಾನ್ಸ್​ಬಾರ್​ಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಪನ್ವೇಲ್​ನಲ್ಲಿರುವ ನೈಟ್ ರೈಡರ್ಸ್​ ಬಾರ್​ಗೆ ಕೋಲು ಹಿಡಿದುಕೊಂಡು ನುಗ್ಗಿ ಪಿಠೋಪಕರಣಗಳನ್ನು ಮತ್ತು ಮದ್ಯದ ಬಾಟಲಿಗಳನ್ನು ಧ್ವಂಸಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಿಸಾನ್ ಮಜ್ದೂರ್ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ರಾಜ್​ ಠಾಕ್ರೆ, "ರಾಯಗಡ ಜಿಲ್ಲೆಯಲ್ಲಿ ಅತಿ ಹೆಚ್ಚು ಡ್ಯಾನ್ಸ್ ಬಾರ್‌ಗಳಿವೆ. ರಾಯಗಢ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ರಾಜಧಾನಿಯಾಗಿತ್ತು. ಇಂತಹ ಪ್ರದೇಶದಲ್ಲಿ ಡ್ಯಾನ್ಸ್ ಬಾರ್​ಗಳು ಕಾರ್ಯನಿರ್ವಹಿಸಬಾರದು. ಅವುಗಳನ್ನು ಮುಚ್ಚಲಾಗಿತ್ತು, ಅಲ್ಲವೇ? ಇಷ್ಟೊಂದು ಡ್ಯಾನ್ಸ್ ಬಾರ್‌ಗಳಿವೆ, ಅವುಗಳ ಮಾಲೀಕರು ಯಾರು? ಕೇವಲ ಮರಾಠಿ ಜನರು ಮಾತ್ರವೇ? ಹಾಗಾದರೆ ನಿಮಗೆ ಡ್ಯಾನ್ಸ್​ ಬಾರ್​ಗಳ ಅಭ್ಯಾಸ ಹುಟ್ಟಿಸಿ ಅದರಲ್ಲಿ ಸಿಕ್ಕಿ ಹಾಕಿಸಲಾಗುತ್ತದೆ" ಎಂದು ವಾಗ್ದಾಳಿ ನಡೆಸಿದ್ದರು.

ಭಾಷಣವನ್ನು ಕೇಳಿ ಕೆರಳಿದ ಎಂಎನ್​ಎಸ್ ಕಾರ್ಯಕರ್ತರು ಪನ್ವೇಲ್​ನ ತಡರಾತ್ರಿ ನುಗ್ಗಿ ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಂಎನ್​ಎಸ್ ನಾಯಕ ಸಂದೀಪ್ ದೇಶಪಾಂಡೆ, ಇದು ಸಾಂಕೇತಿಕ ಪ್ರತಿಭಟನೆ, ಡ್ಯಾನ್ಸ್ ಬಾರ್​ಗಳು ಕಾನೂನು ಬಾಹಿರ, ತಕ್ಷಣವೇ ಸರ್ಕಾರ ಇವುಗಳನ್ನು ಬಂದ್ ಮಾಡಿಸಬೇಕು ಎಂದು ಹೇಳಿದ್ದಾರೆ.

ರಾಜ್​ ಠಾಕ್ರೆ ಬೆಂಬಲಿಗರ ವಿರುದ್ಧ ಈ ಹಿಂದೆ ಮರಾಠಿಯೇತರ ಜನರ ಮರಾಠಿ ಮಾತನಾಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದ ಆರೋಪ ಸಂಬಂಧ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)