ನ್ಯೂಸ್

ರಾಜ್ಯದಲ್ಲಿ ತಗ್ಗಿದ ಮಳೆ ಮುಂದುವರಿದ ನೆರೆಹಾವಳಿ

ಮೋಹನ್​ ಶೆಟ್ಟಿ

ಕರಾವಳಿ, ಮಲೆನಾಡಲ್ಲಿ ವರುಣನ ಅಬ್ಬರ ಇಳಿಮುಖ | ಜಲಾಶಯಗಳಿಗೆ ಭರಪೂರ ನೀರು | ಹಲವೆಡೆ ಹಾನಿ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ತುಸು ಇಳಿಮುಖವಾಗಿದ್ದರೂ, ನದಿಗಳೆಲ್ಲ ಉಕ್ಕಿಹರಿಯುತ್ತಿರುವುದರಿಂದ ನೆರೆ ಆತಂಕ ಮುಂದುವರಿದಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರೂ ನೆರೆ ಇಳಿದಿಲ್ಲ. ನದಿಗಳೆಲ್ಲವೂ ಮೈದುಂಬಿ ಹರಿದು, ಕೃಷಿ ತೋಟ ಹಾಗೂ ಗದ್ದೆಗಳೆಲ್ಲ ಜಲಾವೃತ ಸ್ಥಿತಿಯಲ್ಲಿಯೇ ಇವೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 36.04 ಮಿ.ಮೀ. ಸರಾಸರಿ ಮಳೆಯಾಗಿದೆ. ಕರಾವಳಿಯಲ್ಲಿ ಜುಲೈ 22ರಿಂದ 25ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗೋಡೆ ಕುಸಿದು ಓರ್ವ ಸಾವು: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಗೋಡೆ ಕುಸಿದು ನಿಪ್ಪಾಣಿಯ ಜತ್ರಾಟ್ ವೇಸ್​ನಲ್ಲಿ ತಿರುಪತಿ ವಟಕರ್ (50) ಸಾವಿಗೀಡಾಗಿದ್ದಾರೆ. ಮಳೆಗೆ ಖಾನಾಪುರ ತಾಲೂಕಿನಲ್ಲಿ 31 ಮನೆಗಳು ಬಿದ್ದಿವೆ. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಒಂದು ವಾರದಿಂದ 150ರಿಂದ 170 ಮಿ.ಮೀ. ಮಳೆಯಾಗಿದೆ. ಲೋಂಡಾ ಅರಣ್ಯ ವ್ಯಾಪ್ತಿಯ ಸಾತಾಳಿ ಮತ್ತು ಮಾಚಾಳಿ ಗ್ರಾಮಗಳ ಬಳಿಯ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ನದಿಗಳನ್ನು ಸೇರುವ ಹಳ್ಳ-ಕೊಳ್ಳಗಳಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಜನಜೀವನ ಅಸ್ತವ್ಯಸ್ತವಾಗಿದೆ. ಹಿಡಕಲ್ ಜಲಾಶಯದಲ್ಲಿ ಈಗಾಗಲೆ 33.646 ಟಿಎಂಸಿ ನೀರು ಸಂಗ್ರಹಗೊಂಡಿದೆ. ಮಲಪ್ರಭಾ ಜಲಾಶಯದಲ್ಲಿ 17.220 ಟಿಎಂಸಿ ನೀರು ಸಂಗ್ರಹವಾಗಿದೆ. ಬೆಳಗಾವಿ ತಾಲೂಕಿನ ರಾಕಸಕೊಪ್ಪ ಜಲಾಶಯ ಭರ್ತಿಯಾಗಿದೆ.

ಮಲೆನಾಡಿನಲ್ಲಿ ಮಳೆಗೆ ಭಾನುವಾರ ತುಸು ವಿರಾಮ ದೊರಕಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ನೆರೆ ಹಾನಿ ವೀಕ್ಷಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಘಟ್ಟಪ್ರದೇಶದಲ್ಲಿ ಮಾತ್ರ ಉತ್ತಮ ಮಳೆ ಸುರಿಯಿತು. ಭದ್ರಾ ಜಲಾಶಯಕ್ಕೆ 23,674 ಕ್ಯೂಸೆಕ್, ಲಿಂಗನಮಕ್ಕಿ ಜಲಾಶಯಕ್ಕೆ 48,793 ಕ್ಯೂಸೆಕ್ ನೀರಿನ ಒಳಹರಿವಿದೆ. ತುಂಗಾ ನದಿಯಲ್ಲಿ 53,012 ಕ್ಯೂಸೆಕ್ ನೀರು ಹೋಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಗಾಳಿಯ ರಭಸದಿಂದ ಅನಾಹುತ ಸಂಭವಿಸಿವೆ. ಬಾಳೆಹೊನ್ನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುತ್ತಿದೆ.

ಉತ್ತರ ಕನ್ನಡ, ಧಾರವಾಡ, ಹಾವೇರಿ ಜಿಲ್ಲೆಯ ಬಹುತೇಕ ಕಡೆ ಮಳೆ ಮುಂದುವರಿದಿದೆ. ಉತ್ತರ ಕನ್ನಡದ ನದಿಗಳು ತುಂಬಿ ಹರಿಯುತ್ತಿವೆಯಾದರೂ ಅಪಾಯದ ಮಟ್ಟ ಮೀರಿಲ್ಲ. ಹಾವೇರಿ ಜಿಲ್ಲೆಯಲ್ಲಿ ವರದಾ ಮತ್ತು ಕುಮದ್ವತಿ ನದಿಗಳು ತುಂಬಿ ಹರಿಯುತ್ತಿದ್ದು, ಇನ್ನೂ ಹೆಚ್ಚು ನೀರು ಬಂದರೆ ಪ್ರವಾಹ ಪರಿಸ್ಥಿತಿ ನಿರ್ವಣವಾಗುವ ಆತಂಕವಿದೆ. ಮಳೆಯಿಂದ ಅನೇಕ ಕಡೆಗೆ ಮನೆ ಕುಸಿತ, ಭಾಗಶಃ ಹಾನಿಯಂಥ ಘಟನೆಗಳು ಸಂಭವಿಸಿವೆ.

123.10 ಅಡಿ ತಲುಪಿದ ಕೆಆರ್​ಎಸ್ ನೀರಿನ ಮಟ್ಟ

ಮಂಡ್ಯ ಜಿಲ್ಲೆ ಕೆ.ಆರ್.ಸಾಗರ ಅಣೆಕಟ್ಟೆಗೆ 70,850 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ 123.10 ಅಡಿ ತಲುಪಿದೆ. 25 ಗೇಟುಗಳ ಮೂಲಕ 52,162 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನ, ಉತ್ತರ ಬೃಂದಾವನಕ್ಕೆ ಹೋಗುವ ಪಾದಚಾರಿ ಮಾರ್ಗ ನೀರಿನಲ್ಲಿ ಮುಳಗಡೆಯಾಗಿದೆ.

27ರಂದು ಬಾಗಿನ: ಕೆಆರ್​ಎಸ್ ಅಣೆಕಟ್ಟೆಯ ನೀರಿನ ಮಟ್ಟ 123 ಅಡಿಗೆ ಏರಿಕೆಯಾಗಿ ಭರ್ತಿಗೆ ಕೇವಲ 1.8 ಅಡಿ ಬಾಕಿ ಇರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಕಾರ್ಯಕ್ರದ ಸಿದ್ಧತೆ ಆರಂಭಗೊಂಡಿದೆ. ಅಣೆಕಟ್ಟೆ ತುಂಬಿರುವ ಕಾರಣಕ್ಕೆ ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜು.27ರಂದು ಬಾಗಿನ ಅರ್ಪಿಸಲಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಎರಡು ದಿನಗಳಿಂದ ಮಳೆ ಪ್ರಮಾಣ ತುಸು ಇಳಿಮುಖವಾಗಿದೆ. ಈಗಿನ ಹವಾಮಾನ ಪರಿಸ್ಥಿತಿ ಗಮನಿಸಿದರೆ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ತಗ್ಗಿದೆ. ಆದರೆ, ರಾಜ್ಯದಲ್ಲಿ ಆಗಸ್ಟ್ ನಲ್ಲಿಯೂ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.

| ಸಿ.ಎಸ್.ಪಾಟೀಲ್, ಹವಾಮಾನ ಇಲಾಖೆ ಹಿರಿಯ ಅಧಿಕಾರಿರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿಷೇಧ: ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಕಾರಣ ಇದೀಗ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಶಿರಾಡಿ 24 ಗಂಟೆ ಸಂಚಾರಕ್ಕೆ ಮುಕ್ತ: ಬೆಂಗಳೂರು-ಮಂಗಳೂರು ಸಂರ್ಪಸುವ ಶಿರಾಡಿ ಘಾಟಿ ಬಳಿ ಭೂಕುಸಿತ ಪ್ರದೇಶದ ಮಣ್ಣು ತೆರವು ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ದಿನದ 24 ಗಂಟೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ರಾತ್ರಿಯೇ ಕೆಲ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ಒದಗಿಸಲಾಗಿದ್ದು, ಭಾನುವಾರ ರಾತ್ರಿಯಿಂದ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ದೃಢಪಡಿಸಿದ್ದಾರೆ.