ನ್ಯೂಸ್

ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ: ನಾಳೆಯೂ ಕರಾವಳಿ, ಮಲೆನಾಡಲ್ಲಿ ರೆಡ್ ಅಲರ್ಟ್

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಗುರುವಾರ ಹಲವು ಭಾಗಗಳಲ್ಲಿ ಧಾರಾಕಾರ ವರ್ಷಧಾರೆಯಾಗಿದ್ದು, ಕೊಡಗಿನ ನಾಪೊಕ್ಲು 12 ಸೆಂ.ಮೀ, ರಾಮನಗರ 9 ಸೆಂ.ಮೀ, ತುಮಕೂರಿನ ತುರುವೇಕರೆ 8 ಸೆಂ.ಮೀ ಮಳೆ ಬಿದ್ದಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಆ.5ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಇರಲಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಹಾಗೂ ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಆ.6ರಂದು ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

ಮುಂದಿನ ಮೂರು ದಿನಗಳ ಬಳಿಕ ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆ ತುಸು ಇಳಿಕೆಯಾಗಲಿದೆ. ಪ್ರಸ್ತುತ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಜೂ 1ರಿಂದ ಆ.4ರವರೆಗೆ 506 ಮಿಮೀ ಮಳೆಯಾಗಬೇಕಿತ್ತು. ಆದರೆ, 610 ಮಿಮೀ ಮಳೆಯಾಗಿದ್ದು, ಶೇ.21 ವಾಡಿಕೆಗಿಂತ ಹೆಚ್ಚು ಸುರಿದಿದೆ.