ನ್ಯೂಸ್

ಮಳೆ ಫಜೀತಿ, ಕೆಲವೆಡೆ ಪ್ರವಾಹ ಭೀತಿ

ಬೆಂಗಳೂರು/ ಕಲಬುರಗಿ: ರಾಜ್ಯದಲ್ಲಿ ಮುಂಗಾರು ಆರ್ಭಟ ಮುಂದುವರಿದಿದ್ದು, ಇನ್ನೂ 5 ದಿನ ಮಳೆ ಮುಂದುವರಿಯಲಿದೆ. ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿಯಲ್ಲಿ ಮುಂದಿನ 24 ಗಂಟೆ ಆರೆಂಜ್ ಹಾಗೂ ರಾಯಚೂರು, ಯಾದಗಿರಿಯಲ್ಲಿ ಸೆ.16ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದು, ಸೆ.19 ನಂತರ ಮಳೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಸ್ವಲ್ಪ ಚುರುಕಾಗಿದ್ದು, ವಿವಿಧೆಡೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ.

ನಲುಗಿದ ಕಲಬುರಗಿ: ಕಲಬುರಗಿ ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ಜಾವದವರೆಗೆ ಅಬ್ಬರದ ಮಳೆ ಸುರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ಹೊಕ್ಕಿದ್ದು, ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಯಿತು. ನಗರದಲ್ಲಿ ಮನೆಯೊಂದು ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: 15ನೇ ಶತಮಾನದ ಶ್ರೀರಾಮ-ಸೀತಾ-ಲಕ್ಷ್ಮಣನ ವಿಗ್ರಹಗಳನ್ನು ಹಸ್ತಾಂತರಿಸಿದ ಯುಕೆ; ಯಾವಾಗ ಕಳವಾಗಿದ್ದವು ಗೊತ್ತಾ?

ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಹಳ್ಳದ ಪ್ರವಾಹದಿಂದ ಬಹುತೇಕ ಜಲಾವೃತಗೊಂಡಿತ್ತು. ಜಿಲ್ಲೆಯ 11 ತಾಲೂಕುಗಳಲ್ಲಿ ಭರ್ಜರಿ ಮಳೆಯಾಗಿದ್ದರಿಂದ ಬೆಳೆಗಳು ನೀರಿನಲ್ಲಿ ನಿಂತಿದ್ದು, ರೈತರು ಕಂಗಾಲಾಗಿದ್ದಾರೆ. ಕಲಬುರಗಿ-ಕಾಳಗಿ ನಡುವಿನ ವಚ್ಚಾ ಬಳಿ ಹಳ್ಳ ತುಂಬಿ ಹರಿಯುತ್ತಿದ್ದರಿಂದ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿತ್ತು.

ಬೀದರ್ ತತ್ತರ

ಬೀದರ್ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿದಿದೆ. ಐದಾರು ಗಂಟೆ ಅವಧಿಯಲ್ಲಿ ಸರಾಸರಿ 57 ಮಿಮೀ (ಸಾಮಾನ್ಯ ಮಳೆ 5 ಮಿಮೀ) ಮಳೆಯಾಗಿದೆ. ಭಾಲ್ಕಿ ಮತ್ತು ಹುಮನಾಬಾದ್ ತಾಲೂಕಿನಲ್ಲಿ ವರುಣಾರ್ಭಟ ಜೋರಾಗಿದೆ. ಇವೆರಡೂ ತಾಲೂಕಿನಲ್ಲಿ ಒಂದೇ ರಾತ್ರಿ 75 ಮಿಮೀ ಮಳೆ ಸುರಿದಿದೆ. ಅಲ್ಲಲ್ಲಿ ಹಳ್ಳ-ಕೊಳ್ಳಗಳು ತುಂಬಿದ್ದು, ಸಣ್ಣ ಸೇತುವೆಗಳು ಜಲಾವೃತಗೊಂಡು 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಕಟಾವಿಗೆ ಬಂದ ಉದ್ದು ಸೇರಿ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಮಾಂಜ್ರಾ ನದಿಗೆ ಹೆಚ್ಚಿನ ನೀರು ಹರಿದುಬರುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ವಿಜಯಪುರ, ಯಾದಗಿರಿಯಲ್ಲೂ ಧಾರಾಕಾರ ಮಳೆಯಾಗಿದೆ.