ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಗೆ ಜನರು ಹೈರಾಣಾಗಿದ್ದಾರೆ. ನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ರಾತ್ರಿಯಿಡಿ ಕೆಲ ನಿವಾಸಿಗಳು ಜಾಗರಣೆ ಮಾಡುವಂತಾಗಿದೆ. ಅಲ್ಲದೆ, ಗುಡುಗು ಶಬ್ದಕ್ಕೆ ರಾಜಧಾನಿ (Bengaluru) ಜನರು ಬೆಚ್ಚಿದ್ದಾರೆ.
ಕೆಂಪೇಗೌಡ ಬಸ್ ನಿಲ್ದಾಣ, ಚಾಮರಾಜಪೇಟೆ, ವಿದ್ಯಾಪಿಠ, ಮೈಸೂರು ರಸ್ತೆ, ವಿ.ವಿ.ಪುರ, ಬಸವನಗುಡಿ, ಜೆ.ಪಿ.ನಗರ, ಬನಶಂಕರಿ, ಗಿರಿನಗರ, ಯಶವಂತಪುರ, ನಾಯಂಡಹಳ್ಳಿ, ಕೆಂಗೇರಿ, ಶಾಂತಿನಗರ, ತ್ಯಾಗರಾಜನಗರ, ಜಯನಗರ, ಶ್ರೀನಗರ, ಕೆ.ಆರ್.ಮಾರುಕಟ್ಟೆ, ಟೌನ್ಹಾಲ್, ಕಾರ್ಪೊರೇಷನ್, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೆಶ್ವರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಟ್ಟ ರಸ್ತೆ, ಕೆ.ಆರ್.ಪುರ, ಟಿನ್ಫ್ಯಾಕ್ಟರಿ ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಕತ್ರಿಗುಪ್ಪೆ, ಪದ್ಮನಾಭನಗರ, ನಾಗರಬಾವಿ, ಕೋಣನಕುಂಟೆ, ತಲಟ್ಟಪುರ ಸೇರಿ ನಗರದ ವಿವಿಧೆಡೆ ಜೋರಾಗಿ ವರ್ಷಧಾರೆಯಾಯಿತು.
ಬಾಗಲಗುಂಟೆ 42 ಮೀಲಿ ಮೀಟರ್, ನಾಗಪುರ 38, ಶೆಟ್ಟಿಹಳ್ಳಿ 34, ನಂದಿನಿಲೇಔಟ್ 33, ಬಸವೇಶ್ವರನಗರ 25, ಹೆರೋಹಳ್ಳಿ 23, ರಾಜಾಜಿನಗರ 19, ಪೀಣ್ಯ ಕೈಗಾರಿಕಾ ಪ್ರದೇಶ 14, ಚೊಕ್ಕಸಂದ್ರ 13, ದೊಡ್ಡಬಿದರೆಕಲ್ಲು 12 ಮಿಮೀ ಮಳೆಯಾಗಿದ್ದು, ಮುಂದಿನ 4 ದಿನಗಳ ಕಾಲ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶನಿವಾರ ರಾತ್ರಿ ವರುಣಾರ್ಭಟಕ್ಕೆ ಉತ್ತರಹಳ್ಳಿಯ ಶ್ರೀನಿವಾಸ ಕಾಲನಿಯಲ್ಲಿರುವ ಸರ್ಕಾರಿ ಶಾಲೆಗೆ ಮಳೆ ನೀರು ನುಗ್ಗಿ ಪೀಠೋಪಕರಣಗಳು, ಪುಸ್ತಕಗಳು ಹಾಳಾಗಿವೆ. ಮಳೆ ನೀರು ನುಗ್ಗಿದ್ದರಿಂದ ಕೊಠಡಿಗಳಲ್ಲಿ ಕೆಸರು ಮೆತ್ತಿಕೊಂಡಿತ್ತು. ಶಾಲೆ ಸಿಬ್ಬಂದಿ ನೀರು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.