ಮೈಸೂರು ದಸರಾ ಹಬ್ಬಕ್ಕೆ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳ ವ್ಯವಸ್ಥೆ 
ನ್ಯೂಸ್

Mysuru Dasara 2026: ದಸರಾ ನೋಡೋಕೆ ಮೈಸೂರಿಗೆ ಬರ್ತೀರಾ?; ಪ್ರಯಾಣಿಕರಿಗಾಗಿ ಸ್ಪೆಷಲ್ ಟ್ರೈನ್ ವ್ಯವಸ್ಥೆ!

ಮೈಸೂರು ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆ ಬೆಂಗಳೂರು, ಮೈಸೂರು, ಅಶೋಕಪುರಂ ಹಾಗೂ ಚಾಮರಾಜನಗರ ನಡುವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

ಮೈಸೂರು ದಸರಾ ಅಕ್ಟೋಬರ್ 11ರಿಂದ 21ರವರೆಗೆ

ಅಕ್ಟೋಬರ್ 16ರಿಂದ 22ರವರೆಗೆ ವಿಶೇಷ ರೈಲುಗಳ ಸಂಚಾರ

ಬೆಂಗಳೂರು-ಮೈಸೂರು ನಡುವೆ ಹೆಚ್ಚುವರಿ ರೈಲು ಸೇವೆ

Mysuru Dasara 2026: ಕರುನಾಡಿನ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯ ಅದ್ದೂರಿ ದಸರಾ ಮಹೋತ್ಸವ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ. ಜುಲೈ 26ರಿಂದ ಗಜಪಯಣವೂ ಆರಂಭವಾಗಲಿದೆ. ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಲಿದ್ದು, ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

ಅಕ್ಟೋಬರ್ 16ರಿಂದ 22ರವರೆಗೆ ಕೆಎಸ್‌ಆರ್ ಬೆಂಗಳೂರು, ಮೈಸೂರು, ಅಶೋಕಪುರಂ ಮತ್ತು ಚಾಮರಾಜನಗರ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳು ಓಡಲಿವೆ. ಈ ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಪಡೆದೇ ಸುಲಭವಾಗಿ ಪ್ರಯಾಣಿಸಬಹುದು.

ಬೆಂಗಳೂರು-ಅಶೋಕಪುರಂ ನಡುವೆ 3 ಟ್ರಿಪ್

ರೈಲು ಸಂಖ್ಯೆ 06285/06286 ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ನಡುವೆ ಅಕ್ಟೋಬರ್ 19, 20 ಮತ್ತು 21ರಂದು ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12.15ಕ್ಕೆ ಹೊರಟು 3.40ಕ್ಕೆ ಅಶೋಕಪುರಂ ತಲುಪಲಿದೆ. ವಾಪಸ್‌ ಅಶೋಕಪುರಂನಿಂದ ಸಂಜೆ 4.10ಕ್ಕೆ ಹೊರಟು ರಾತ್ರಿ 8ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ರೈಲು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮೈಸೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಬೆಂಗಳೂರು-ಮೈಸೂರು ನಡುವೆ 6 ಟ್ರಿಪ್

ರೈಲು ಸಂಖ್ಯೆ 06287/06288 ಅಕ್ಟೋಬರ್ 16ರಿಂದ 21ರವರೆಗೆ ಒಟ್ಟು 6 ಟ್ರಿಪ್‌ಗಳಲ್ಲಿ ಓಡಲಿದೆ. ಕೆಎಸ್‌ಆರ್ ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಟು ಮರುದಿನ 12.20ಕ್ಕೆ ಮೈಸೂರು ತಲುಪಲಿದೆ. ವಾಪಸ್‌ ಮೈಸೂರಿನಿಂದ ರಾತ್ರಿ 12.30ಕ್ಕೆ ಹೊರಟು ಬೆಳಗ್ಗೆ 3.30ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ರೈಲು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ದಸರಾ ಸಂಭ್ರಮಕ್ಕೆ ರೈಲ್ವೆ ಸಜ್ಜು

ಮೈಸೂರು-ಬೆಂಗಳೂರಿಗೆ ಮತ್ತೊಂದು ಸ್ಪೆಷಲ್ ಟ್ರೈನ್

ರೈಲು ಸಂಖ್ಯೆ 06297/06298 ಕೂಡ ಅಕ್ಟೋಬರ್ 16ರಿಂದ 21ರವರೆಗೆ 6 ಟ್ರಿಪ್‌ಗಳಲ್ಲಿ ಸಂಚರಿಸಲಿದೆ. ಮೈಸೂರಿನಿಂದ ರಾತ್ರಿ 11.15ಕ್ಕೆ ಹೊರಟು 2.50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ವಾಪಸ್‌ ಬೆಂಗಳೂರಿನಿಂದ ಬೆಳಗಿನ ಜಾವ 3.15ಕ್ಕೆ ಹೊರಟು 6.30ಕ್ಕೆ ಮೈಸೂರು ತಲುಪಲಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.

ಮೈಸೂರು-ಚಾಮರಾಜನಗರಕ್ಕೂ ವಿಶೇಷ ರೈಲು

ದಸರಾ ಕೊನೆಯ ದಿನವಾದ ಅಕ್ಟೋಬರ್ 21ರಂದು ಮೈಸೂರು-ಚಾಮರಾಜನಗರ ನಡುವೆ ಎರಡು ವಿಶೇಷ ರೈಲು ಸೇವೆಗಳು ಇರಲಿವೆ. 06293/06294 ರೈಲು ಮೈಸೂರಿನಿಂದ ರಾತ್ರಿ 9.30ಕ್ಕೆ ಹೊರಟು 11.20ಕ್ಕೆ ಚಾಮರಾಜನಗರ ತಲುಪಲಿದೆ. ವಾಪಸ್‌ ಚಾಮರಾಜನಗರದಿಂದ ರಾತ್ರಿ 11.50ಕ್ಕೆ ಹೊರಟು 1.50ಕ್ಕೆ ಮೈಸೂರು ತಲುಪಲಿದೆ.

ಮೈಸೂರಿನಿಂದ ಚಾಮರಾಜನಗರ ತಲುಪುವ ರೈಲು

ಇನ್ನು, ಇದೇ ಮಾರ್ಗದಲ್ಲಿ 06289/06290 ರೈಲು ಮೈಸೂರಿನಿಂದ ರಾತ್ರಿ 12.10ಕ್ಕೆ ಹೊರಟು 2 ಗಂಟೆಗೆ ಚಾಮರಾಜನಗರ ತಲುಪಲಿದೆ. ವಾಪಸ್‌ ಚಾಮರಾಜನಗರದಿಂದ 2.30ಕ್ಕೆ ಹೊರಟು 4.15ಕ್ಕೆ ಮೈಸೂರು ತಲುಪಲಿದೆ. ಈ ರೈಲುಗಳು ಅಶೋಕಪುರಂ, ಕಡಕೊಳ, ನಂಜನಗೂಡು ಟೌನ್ ಸೇರಿದಂತೆ ಮಾರ್ಗದಲ್ಲಿರುವ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಇದನ್ನೂ ಓದಿ: ಮದುವೆಗೆ ವರುಣನ ಅಡ್ಡಿ; ಮಳೆ ಹೊಡೆತಕ್ಕೆ ಕುಸಿದ ಮೇಲ್ಛಾವಣಿ ಹಿಡಿದು ನಿಂತ ಅತಿಥಿಗಳು! | Australia Viral Video

ದಸರಾ ದಿನಗಳಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಹಬ್ಬದ ವೇಳೆ ಸುಗಮ ಓಡಾಟಕ್ಕೂ ಈ ರೈಲುಗಳು ಸಹಾಯವಾಗಲಿವೆ.