ಮದುವೆಗೆ ವರುಣನ ಅಡ್ಡಿ; ಮಳೆ ಹೊಡೆತಕ್ಕೆ ಕುಸಿದ ಮೇಲ್ಛಾವಣಿ ಹಿಡಿದು ನಿಂತ ಅತಿಥಿಗಳು! | Australia Viral Video

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮದುವೆ ಸಮಾರಂಭದ ವೇಳೆ ಭಾರೀ ಮಳೆ, ಆಲಿಕಲ್ಲು ಮಳೆಯಿಂದ ಮೇಲ್ಛಾವಣಿ ಕುಸಿಯುವ ಸ್ಥಿತಿ ನಿರ್ಮಾಣವಾಗಿತ್ತು. ಅತಿಥಿಗಳು ಕುರ್ಚಿಗಳ ಸಹಾಯದಿಂದ ಮೇಲ್ಛಾವಣಿ ಹಿಡಿದು ನಿಂತ ವಿಡಿಯೋ ವೈರಲ್ ಆಗಿದೆ.
Guests holding up the roof
ಸಿಡ್ನಿಯಲ್ಲಿ ಮದುವೆ ಸಂಭ್ರಮಕ್ಕೆ ಮಳೆ ಅಡ್ಡಿ
Published on: 

Sydney Heavy Rain: ಮದುವೆ ಅಂದ್ರೆ ಸಂಭ್ರಮ, ನಗು, ಫೋಟೋ, ಊಟ... ಹೀಗೆ ಖುಷಿಯ ವಾತಾವರಣ ಇರೋದು ಕಾಮನ್. ಆದ್ರೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಮದುವೆಯೊಂದರಲ್ಲಿ ಇದ್ದವರಿಗೆ ಏಕಾಏಕಿ ಬಿರುಗಾಳಿಯೇ ಶಾಕ್ ಕೊಟ್ಟಿದೆ. ಭಾರೀ ಮಳೆ, ಆಲಿಕಲ್ಲು ಮಳೆಗೆ ಸಮಾರಂಭ ನಡೆಯುತ್ತಿದ್ದ ಸ್ಥಳದ ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿದ್ದು, ಅತಿಥಿಗಳು ಕುರ್ಚಿಗಳ ಸಹಾಯದಿಂದ ಅದನ್ನು ಹಿಡಿದು ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ.

ಸಿಡ್ನಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಭಾರೀ ಗುಡುಗು-ಮಿಂಚಿನೊಂದಿಗೆ ಮಳೆ ಹಾಗೂ ಆಲಿಕಲ್ಲು ಸುರಿದಿದೆ. ಮೇಲ್ಛಾವಣಿಯಲ್ಲಿ ನೀರು ಮತ್ತು ಆಲಿಕಲ್ಲು ಸಂಗ್ರಹವಾಗಿ ತೂಕ ಹೆಚ್ಚಾದ ಪರಿಣಾಮ ಅದರ ಒಂದು ಭಾಗ ಕೆಳಕ್ಕೆ ಬಾಗಿದೆ. ಇದರಿಂದ ಎಚ್ಚೆತ್ತ ಅತಿಥಿಗಳು ಮರದ ಕುರ್ಚಿಗಳ ಸಹಾಯದಿಂದ ಮೇಲ್ಛಾವಣಿಯನ್ನು ಹಿಡಿದು ನಿಂತಿದ್ದಾರೆ.

ಮದುವೆ ಮೇಜಿನ ಮೇಲೆಯೇ ನಿಂತ ಅತಿಥಿಗಳು

ಸೂಟ್ ಸೇರಿದಂತೆ ಮದುವೆಯ ಉಡುಪಿನಲ್ಲಿದ್ದ ಅತಿಥಿಗಳು ಒಟ್ಟಾಗಿ ನಿಂತು ಕುರ್ಚಿಗಳನ್ನು ಮೇಲಕ್ಕೆತ್ತಿ ಬಾಗಿದ್ದ ಮೇಲ್ಛಾವಣಿಯನ್ನು ಹಿಡಿದಿದ್ದಾರೆ. ಕೆಳಗೆ ಮದುವೆ ಸಮಾರಂಭಕ್ಕಾಗಿ ಸಿದ್ಧಪಡಿಸಿದ್ದ ಮೇಜುಗಳ ಮೇಲೆ ಪ್ಲೇಟ್, ಗ್ಲಾಸ್, ನ್ಯಾಪ್ಕಿನ್‌ಗಳೆಲ್ಲ ಹಾಗೆಯೇ ಇದ್ದವು. ಮೇಲ್ಛಾವಣಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಅದು ಮತ್ತಷ್ಟು ಕುಸಿಯದಂತೆ ಅತಿಥಿಗಳು ಕುರ್ಚಿಗಳ ಸಹಾಯದಿಂದ ಮೇಲಕ್ಕೆ ತಳ್ಳುತ್ತಿದ್ದರು.

ಆಲಿಕಲ್ಲು ಮಳೆಗೆ ಬೆಚ್ಚಿಬಿದ್ದ ಅತಿಥಿಗಳು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಭಾರೀ ಮಳೆಯ ನಡುವೆಯೂ ಅತಿಥಿಗಳು ಮೇಲ್ಛಾವಣಿಯನ್ನು ಹಿಡಿದು ನಿಂತಿರುವ ದೃಶ್ಯ ಕಾಣಿಸಿದೆ. ಮತ್ತೊಂದು ವಿಡಿಯೋದಲ್ಲಿ ಸಮಾರಂಭದ ಸ್ಥಳದ ಹುಲ್ಲುಹಾಸಿನ ಮೇಲೆ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿರುವುದು ಕಂಡುಬಂದಿದೆ. ಈ ಘಟನೆ ಬಗ್ಗೆ ಮಾತನಾಡಿದ ಅತಿಥಿಯೊಬ್ಬರು, ಪರಿಸ್ಥಿತಿ ಒಂದೆಡೆ ಆತಂಕ ಮೂಡಿಸಿದರೆ, ಮತ್ತೊಂದೆಡೆ ಸ್ವಲ್ಪ ನಗೆ ತರಿಸುವಂತಿತ್ತು ಎಂದು ಹೇಳಿದ್ದಾರೆ.

ತುರ್ತು ಸೇವೆಗಳಿಗೆ 180ಕ್ಕೂ ಹೆಚ್ಚು ಕರೆ

ಸಿಡ್ನಿ ಸೇರಿದಂತೆ ನ್ಯೂ ಸೌತ್ ವೇಲ್ಸ್ ಪ್ರದೇಶದಲ್ಲಿ ಭಾರೀ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದಿದ್ದು, ತುರ್ತು ಸೇವೆಗಳಿಗೂ ಕೆಲಸ ಹೆಚ್ಚಾಗಿದೆ. ಬಿರುಗಾಳಿಗೆ ಸಂಬಂಧಿಸಿದಂತೆ ನ್ಯೂ ಸೌತ್ ವೇಲ್ಸ್ ತುರ್ತು ಸೇವೆಗಳಿಗೆ 180ಕ್ಕೂ ಹೆಚ್ಚು ಸಹಾಯ ಕರೆಗಳು ಬಂದಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ಪ್ರೇಮಾನಂದ ಮಹಾರಾಜ್ ಭೇಟಿ; ಏನಿದು 5 ಕೋಟಿ ರೂ. ಆರೋಪದ ವಿವಾದ? | Virat Kohli

ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳೇ ಕುರ್ಚಿಗಳ ಸಹಾಯದಿಂದ ಮೇಲ್ಛಾವಣಿ ಹಿಡಿದು ರಕ್ಷಿಸಲು ಮುಂದಾದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net