ನ್ಯೂಸ್

ಪತ್ನಿ ಮಾಡಿದ ಎಡವಟ್ಟಿಗೆ ಕೆಲಸವೂ ಹೋಯ್ತು, ಜೀವನವೂ ಹಾಳಾಯಿತು! ತಪ್ಪಾಗಿ ಹೇಳಿದ ಆ ಒಂದು ಪದಕ್ಕೆ ರೈಲ್ವೆ ಇಲಾಖೆಗೆ 3 ಕೋಟಿ ರೂ. ನಷ್ಟ

ಇತ್ತೀಚೆಗೆ ನಡೆದ ಒಂದು ಶಾಕಿಂಗ್ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ವಿಶಾಖಪಟ್ಟಣದಲ್ಲಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಮಾಡಿದ ಆ ಒಂದು ಎಡವಟ್ಟಿನಿಂದ ತಮ್ಮ ಕೆಲಸವನ್ನು ಕಳೆದುಕೊಂಡರು, ಜತೆಗೆ ಸುಖಕರ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಗಂಡ-ಹೆಂಡತಿ ಜಗಳ ಕರ್ತವ್ಯಕ್ಕೆ ತೊಂದರೆ ಉಂಟುಮಾಡಿದ ಹಿನ್ನಲೆ ರೈಲ್ವೆ ಇಲಾಖೆಗೆ ಮೂರು ಕೋಟಿ ರೂ. ನಷ್ಟವಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಅಸಲಿಗೆ ಘಟನೆ ಏನು? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಛತ್ತೀಸ್‌ಗಢದ ದುರ್ಗ್‌ನ ಮಹಿಳೆಯನ್ನು ಅಕ್ಟೋಬರ್ 12, 2011ರಂದು ವಿವಾಹವಾಗಿದ್ದ ಸ್ಟೇಷನ್ ಮಾಸ್ಟರ್​, ಮದುವೆಗೂ ಮೊದಲು ಅವಳು ಬೇರೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದ ಕಾರಣ, ತನ್ನ ಜತೆ ಮದುವೆಯಾಗಲು ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಹೇಗೋ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಬ್ಬರ ನಡುವೆ ಯಾವುದು ಸರಿಯಿರಲಿಲ್ಲ. ಪತಿಯೊಂದಿಗೆ ಆನಂದ ಕಾಣಬೇಕಿದ್ದ ಮಹಿಳೆ, ತನ್ನ ಪ್ರಿಯರಕನ ಜತೆ ಸಂಬಂಧ ಮುಂದುವರಿಸಿದ್ದಳು ಎಂದು ಆಕೆಯ ಪತಿ ಆರೋಪಿಸಿದ್ದರು. ಇದೇ ವಿಷಯಕ್ಕೆ ಇಬ್ಬರ ಮಧ್ಯೆಯೂ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ಈ ವರ್ತನೆ ಸ್ಟೇಷನ್ ಮಾಸ್ಟರ್​ಗೆ ಇಷ್ಟವಾಗ್ತಿರಲಿಲ್ಲ.

ಅದೇ ವಿಚಾರಕ್ಕೆ ಜಟಾಪಟಿ

ಈ ವಿಚಾರದ ಬಗ್ಗೆ ಪತಿ ತನ್ನ ಅತ್ತಿಗೆಗೂ ಹೇಳಿದ್ದಾನೆ. ಇಷ್ಟಾದರೂ ಸಹ ಪತ್ನಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಇದೇ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ಸ್ಫೋಟಗೊಳ್ಳುತ್ತಿತ್ತು. ಆ ಜಗಳ ತಾರಕಕ್ಕೇರುತ್ತಿತ್ತು. ಹೀಗೆ ಒಂದು ರಾತ್ರಿ ಕರ್ತವ್ಯದಲ್ಲಿದ್ದ ಸ್ಟೇಷನ್​ ಮಾಸ್ಟರ್​ಗೆ ಪತ್ನಿ ದೂರವಾಣಿ ಕರೆ ಮಾಡಿದ್ದಾಳೆ. ಆಗ ಮತ್ತೆ ಅದೇ ವಿಚಾರಕ್ಕೆ ಮತ್ತೆ ಜಟಾಪಟಿ ಆರಂಭವಾಗಿದೆ. ಕರೆಯಲ್ಲಿ ಪರಸ್ಪರ ಕಿತ್ತಾಡುತ್ತಿದ್ದ ಪತ್ನಿಗೆ, ನಾನು ಮನೆಗೆ ಬಂದು ಮಾತನಾಡ್ತೀನಿ. ಈಗ ಇದಕ್ಕೆಲ್ಲ ಸಮಯವಿಲ್ಲ ಎಂದು ಹೇಳಿ, ಫೋನ್ ಇಟ್ಟಿದ್ದಾರೆ. ಇದೇ ವೇಳೆ ತಮ್ಮ ಮೈಕ್ರೋಫೋನ್​ ಆನ್​ನಲ್ಲಿಟ್ಟಿದ್ದನ್ನು ಮರೆತುಹೋಗಿದ್ದ ಸ್ಟೇಷನ್ ಮಾಸ್ಟರ್​, ಅಲ್ಲೇ ತಮ್ಮ ಕರ್ತವ್ಯಕ್ಕೆ ಲೋಪ ತರುವಂತ ಎಡವಟ್ಟು ಮಾಡಿಕೊಂಡಿದ್ದಾರೆ.

ನಿಯಮಾವಳಿಗೆ ಇದು ವಿರುದ್ಧ

ಪತ್ನಿಯ ಜತೆ ತೀವ್ರ ವಾಗ್ವಾದ ನಡೆಸುತ್ತಿದ್ದ ಸ್ಟೇಷನ್ ಮಾಸ್ಟರ್, ಯಾವುದೋ ಘಳಿಗೆಯಲ್ಲಿ ಓಕೆ ಎಂಬ ಪದವನ್ನು ಆಕೆಗೆ ಹೇಳಿದ್ದಾರೆ. ಪ್ರತ್ಯೇಕವಾಗಿ ಇದೊಂದು ಪದ ಮಾತ್ರ ಆಲಿಸಿದ ಅವರ ಸಹೋದ್ಯೋಗಿ, ಮತ್ತೊಂದು ಕಡೆಯಿಂದ ಆಗಮಿಸಲು ಗ್ರೀನ್​ ಸಿಗ್ನಲ್​ಗಾಗಿ ಕಾಯುತ್ತಿದ್ದ ಗೂಡ್ಸ್​ ರೈಲು ಚಾಲಕನಿಗೆ ಹೊರಡಿ ಎಂದು ಹೇಳಿಬಿಟ್ಟಿದ್ದಾರೆ. ಸ್ಟೇಷನ್ ಮಾಸ್ಟರ್​ ತನ್ನ ಪತಿಗೆ ಹೇಳಿದ ಓಕೆ ಎಂಬ ಪದವನ್ನು ಮಾತ್ರ ಆಲಿಸಿ, ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಅವರ ಸಹೋದ್ಯೋಗಿ, ಮತ್ತೊಂದು ರೈಲಿನ ಪ್ರವೇಶಕ್ಕೆ ಅನುಮತಿ ಕೊಟ್ಟಿದ್ದಾರೆ. ರಾತ್ರಿ ನಿಯಮಾವಳಿಗೆ ಇದು ವಿರುದ್ಧವಾಗಿದ್ದ ಹಿನ್ನಲೆ ಇದರಿಂದ ರೈಲ್ವೆ ಇಲಾಖೆಗೆ 3 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

ವಿಚ್ಛೇದನಕ್ಕೆ ಅರ್ಜಿ

ಈ ಕಾರಣಕ್ಕೆ ಸ್ಟೇಷನ್​ ಮಾಸ್ಟರ್​ರನ್ನು ರೈಲ್ವೆ ಇಲಾಖೆ ಕರ್ತವ್ಯದಿಂದ ವಜಾಗೊಳಿಸಿತು. ಇದಾದ ಬಳಿಕ ಸ್ಟೇಷನ್ ಮಾಸ್ಟರ್ ದುರದೃಷ್ಟವಶಾತ್, ಅವರ ಪರಿಸ್ಥಿತಿ ತೀರ ಹದಗೆಟ್ಟಿತು. ವ್ಯಕ್ತಿಯ ವೈವಾಹಿಕ ಜೀವನ ಮತ್ತಷ್ಟು ಜಟಿಲವಾಯಿತು. ತನ್ನ ಪತ್ನಿಯ ವರ್ತನೆಯಿಂದ ಬೇಸತ್ತು ಹೋಗಿದ್ದ ಸ್ಟೇಷನ್ ಮಾಸ್ಟರ್​, ಮೊದಲೇ ಅಮಾನತು ಆಗಿದ್ದರಿಂದ ಕಂಗಾಲಾಗಿದ್ದರು. ಇದರ ಮಧ್ಯೆ ಹೆಂಡತಿಯ ಜಗಳ ಅವರ ನೆಮ್ಮದಿ ಕೆಡಿಸಿತು. ಇದಕ್ಕೆ ಒಂದು ಮುಕ್ತಾಯ ಹಾಡಬೇಕು ಎಂದು ಸಿಡಿದೆದ್ದ ಅವರು, ವಿಶಾಖಪಟ್ಟಣಂ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತನ್ನ ವಿರುದ್ಧವೇ ಪತಿ ಕೋರ್ಟ್​ ಮೆಟ್ಟಿಲೇರಿದ ಎಂದು ಕುಪಿತಗೊಂಡ ಪತ್ನಿ, ಗಂಡನ ವಿರುದ್ಧ ಸೆಕ್ಷನ್ 498ಎ ಅಡಿಯಲ್ಲಿ ದೌರ್ಜನ್ಯ ಪ್ರಕರಣ ದಾಖಲಿಸಿದಳು.

ಸುಳ್ಳು ಆರೋಪ

ಕೇವಲ ಗಂಡನ ಮೇಲೆ ಕೇಸ್​ ಹಾಕದ ಆಕೆ, ಪತಿಯ ತಾಯಿ, ಸಹೋದರ ಮತ್ತು ಕುಟುಂಬಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು. ತಾರಕಕ್ಕೇರಿದ ಇಬರಿಬ್ಬರ ಪ್ರಕರಣ ಸುಪ್ರೀಂಕೋರ್ಟ್​ಗೆ ತಲುಪಿತು. ಈ ಕೇಸ್​ನ ಸುಪ್ರೀಂಕೋರ್ಟ್​ಗೆ ತಂದ ಆಕೆ, ಡಿವೋರ್ಸ್​​ ಪ್ರಕರಣವನ್ನು ವಿಶಾಖಪಟ್ಟಣದ ಕೋರ್ಟಿನಿಂದ ದುರ್ಗ್​ಗೆ ವರ್ಗಾಯಿಸುವಂತೆ ಮಾಡಿದಳು. ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ದುರ್ಗ್ ಕೌಟುಂಬಿಕ ನ್ಯಾಯಾಲಯ. ಈ ಕೇಸ್​ ಅನ್ನು ವಜಾಗೊಳಿಸಿತು. ಅಲ್ಲಿಂದ ಛತ್ತೀಸ್‌ಗಢ ಹೈಕೋರ್ಟ್‌ ಮೊರೆ ಹೋದ ಇಬ್ಬರ ವಿಚಾರಣೆ ನ್ಯಾಯಾಲಯದಲ್ಲಿ ಬಹಳ ದಿನಗಳಿಂದ ನಡೆಯುತ್ತಿತ್ತು. ನ್ಯಾಯಮೂರ್ತಿ ರಜನಿ ದುಬೆ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಜೈಶ್ವಾಲ್ ಅವರನ್ನೊಳಗೊಂಡ ಪೀಠ, ಮಹಿಳೆ ಸುಳ್ಳು ಆರೋಪಗಳನ್ನು ಮಾಡಿದ್ದಾಳೆ. ಗಂಡನ ಜತೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾಳೆ ಎಂದು ಅಭಿಪ್ರಾಯಿಸಿ, ವಿಚ್ಛೇದನ ನೀಡುವ ಮೂಲಕ ಇವರಿಬ್ಬರ ಜಗಳಕ್ಕೆ ಪೂರ್ಣವಿರಾಮ ಇಟ್ಟಿದೆ,(ಏಜೆನ್ಸೀಸ್).