ನ್ಯೂಸ್

ರೈಲ್ವೆ ನೇಮಕಾತಿ ಕನ್ನಡದಲ್ಲಿ ಅರ್ಜಿ ಸಲ್ಲಿಸಿದರೆ ರಿಜೆಕ್ಟ್!

ರಮೇಶ್ ಮೈಸೂರು, ಬೆಂಗಳೂರು

ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ನೇಮಕಾತಿ ಪರೀಕ್ಷೆಗೆ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ಶ್ರಮಿಸುತ್ತಿದ್ದರೆ, ಹುಬ್ಬಳ್ಳಿ ಕೇಂದ್ರಸ್ಥಾನವಾಗುಳ್ಳ ನೈಋತ್ಯ ರೈಲ್ವೆ ವಲಯ ವಿವಿಧ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಅರ್ಜಿ ಸಲ್ಲಿಸಿದರೆ ತಿರಸ್ಕರಿಸುವುದಾಗಿ ತಿಳಿಸಿದೆ. ಇತ್ತೀಚೆಗಷ್ಟೇ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲ್ವೆ ನೇಮಕಾತಿಯ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸು ವುದಾಗಿ ಘೋಷಿಸಿದ್ದರು. ಜತೆಗೆ, ನೈಋತ್ಯ ರೈಲ್ವೆಯಲ್ಲಿ ಬಡ್ತಿ ಹಾಗೂ ಇತರ ಉದ್ದೇಶಗಳ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ನಿರ್ದೇಶಿಸಿದ್ದರು. ಹೀಗಿರುವಾಗ ಕನ್ನಡದಲ್ಲಿ ಅರ್ಜಿ ಸಲ್ಲಿಸುವುದನ್ನೇ ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಸದ್ಯ ನೈಋತ್ಯ ರೈಲ್ವೆಯಲ್ಲಿ ವಿವಿಧ ಕ್ರೀಡಾಪಟುಗಳಿಗಾಗಿ ಗ್ರೂಪ್ ಸಿ ಹಾಗೂ ಡಿ ವೃಂದ ಹುದ್ದೆ ಮೀಸಲಿಟ್ಟು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 46 ಹುದ್ದೆಗಳಿದ್ದು, ಆಫ್​ಲೈನ್​ನಲ್ಲಿ ಅರ್ಜಿ ಆಹ್ವಾನಿಸಿದೆ. ನೈಋತ್ಯ ರೈಲ್ವೆ ನೇಮಕಾತಿ ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿರುವ ಲಿಂಕ್​ನಲ್ಲಿ ಅರ್ಜಿಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಕಿದೆ.

ಇದನ್ನು ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಮಾತ್ರ ಕೈಬರಹದಲ್ಲಿ ಭರ್ತಿ ಮಾಡಬೇಕೆಂದು ತಿಳಿಸಿದೆ. ಬೇರಾವುದೇ ಭಾಷೆಯಲ್ಲಿದ್ದರೂ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇಂಗ್ಲಿಷ್​ನಲ್ಲಿ ಅರ್ಜಿ ನಮೂನೆ: ನೈಋತ್ಯ ರೈಲ್ವೆ ವೆಬ್​ಸೈಟ್​ನಲ್ಲಿ ನೀಡಿರುವ ಅರ್ಜಿ ನಮೂನೆ ಇಂಗ್ಲಿಷ್​ನಲ್ಲಿದೆ. ಹಿಂದಿಗೆ ಅರ್ಜಿ ನಮೂನೆಯನ್ನು ಪ್ರತ್ಯೇಕವಾಗಿಯೂ ನೀಡಿಲ್ಲ. ಇಂಗ್ಲಿಷ್​ನಲ್ಲಿರುವ ಅರ್ಜಿಯನ್ನು ಹಿಂದಿಯಲ್ಲಿ ಭರ್ತಿ ಮಾಡಬಹುದಾದರೆ ಕನ್ನಡಕ್ಕೇಕೆ ನಿಷೇಧ ಎಂಬುದು ಪ್ರಶ್ನೆ.

ವಲಯವಾರು ನೇಮಕಾತಿ: ಈ ನೇಮಕಾತಿಗಳು ವಲಯ ಮಟ್ಟಕ್ಕೆ ಸೀಮಿತವಾಗಿವೆ. ನೈಋತ್ಯ ವಲಯದ ಮೀಸಲು, ಕೇಂದ್ರ ಕಚೇರಿ ಮೀಸಲು, ಬೆಂಗಳೂರು ವಿಭಾಗ, ಹುಬ್ಬಳ್ಳಿ ವಿಭಾಗ ಹಾಗೂ ಮೈಸೂರು ವಿಭಾಗದ ಕೋಟಾ ಅನ್ವಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೆಡ್​ಕ್ವಾರ್ಟರ್ ಕೋಟಾದಡಿಯಲ್ಲಿ 31, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಕೋಟಾದನ್ವಯ ತಲಾ 5ರಂತೆ ಒಟ್ಟು 15 ಸೇರಿ 46 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯದಲ್ಲೇ ಆಯ್ಕೆ ಟ್ರಯಲ್ಸ್: ಕ್ರೀಡಾಪಟುಗಳ ಆಯ್ಕೆಗಾಗಿ ಹುಬ್ಬಳ್ಳಿ, ಮೈಸೂರು ಅಥವಾ ಬೆಂಗಳೂರಿನಲ್ಲಿ ಆಯ್ಕೆ ಟ್ರಯಲ್ಸ್ ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

10, 12ನೇ ಕ್ಲಾಸ್ ಹುದ್ದೆಗಳು: ಐದನೇ ಹಂತದ ವೇತನ ಶ್ರೇಣಿಯಿರುವ 5 ಹುದ್ದೆಗಳನ್ನು ಹೊರತುಪಡಿಸಿ ಉಳಿದೆಲ್ಲ ಹುದ್ದೆಗಳಿಗೂ 10ನೇ ಅಥವಾ 12ನೇ ತರಗತಿ ವಿದ್ಯಾರ್ಹತೆ ಕೋರಲಾಗಿದೆ. ಹೀಗಿರುವಾಗ ಇಂಗ್ಲಿಷ್ ಹಾಗೂ ಹಿಂದಿ ತಿಳಿದಿರಲೇಬೇಕು ಎಂದು ಕಡ್ಡಾಯ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ರೈಲ್ವೆ ಇಲಾಖೆ ನೇಮಕಾತಿ ವಿಚಾರದಲ್ಲಿ ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು. ಇದನ್ನು ಕೇಂದ್ರ ಸರ್ಕಾರ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂಥ ಪ್ರಮಾದ ಸಲ್ಲ.

| ಮಹೇಂದ್ರ ಸಿಂನೈಋತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ