ನ್ಯೂಸ್

ಸಿರವಾರ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ಧ ಗಂಭೀರ ಆರೋಪ: ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ

ರಾಯಚೂರು: ಮಹಿಳಾ ಪಿಎಸ್​ಐ ಕಿರುಕುಳ ತಾಳಲಾರದೇ ಡೆತ್​ನೋಟ್​ ಬರೆದಿಟ್ಟು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಸಿರವಾರದಲ್ಲಿ ನಡೆದಿದೆ. ತಾಯಣ್ಣ ನೀಲಗಲ್ ನಾಪತ್ತೆಯಾದ ಯುವಕ.

ಸಿರವಾರ ಠಾಣೆಯ ಪಿಎಸ್​ಐ ಗೀತಾಂಜಲಿ ಶಿಂಧೆ ಅವರು ಮೂರು ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ತಾಯಣ್ಣ ಆರೋಪ ಮಾಡಿದ್ದಾನೆ.

ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ್ದ ಆರೋಪವನ್ನು ತಾಯಣ್ಣ ಹೊತ್ತಿದ್ದ. ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ (ಡಿ.02) ತಾಯಣ್ಣನನ್ನು ಪಿಎಸ್​ಐ ಗೀತಾಂಜಲಿ ಶಿಂಧೆ ಠಾಣೆಗೆ ಕರೆಸಿದ್ದರು. ಬಹಳ ಹೊತ್ತು ಲಾಕಪ್​ನಲ್ಲಿ ಕೂರಿಸಿದ್ದರಿಂದ ಮನ‌ನೊಂದು ನಾಪತ್ತೆತಾಗಿರುವುದಾಗಿ ಯುವಕ ಡೆತ್​ನೋಟ್​ನಲ್ಲಿ ಉಲ್ಲೇಖಸಿದ್ದಾನೆ.

ಸದ್ಯ ನಾಪತ್ತೆಯಾಗಿರುವ ತಾಯಣ್ಣನ ವಿರುದ್ಧ 4 ಕ್ರಿಮಿನಲ್ ಹಾಗೂ 5 ಸಿವಿಲ್ ಪ್ರಕರಣಗಳಿರುವ ಮಾಹಿತಿ ಇದೆ.

ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಪಿಎಸ್​ಐ ಗೀತಾಂಜಲಿ ಶಿಂಧೆ ಅವರೇ ಕಾರಣ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದ ಭಯಭೀತನಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಹೊರಗಡೆ ಹೋದಾಗಲೆಲ್ಲ ಜೀಪ್​ ನಿಲ್ಲಿಸಿ, ನನಗೆ ಹೊಡೆದಂತಹ ಅನೇಕ ಪ್ರಸಂಗಗಳು ಇವೆ. ಅದನ್ನು ಈವರೆಗೂ ನಾನು ಯಾರಿಗೂ ಹೇಳಿಕೊಂಡಿರಲಿಲ್ಲ. ಇದೀಗ ನಾನು ಬಹಳಷ್ಟು ನೊಂದಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.

ನಿನ್ನೆ ಸಾಯಂಕಾಲ ನನ್ನನ್ನು ಠಾಣೆಗೆ ಕರೆಸಿದರು. ನಾನು ಮಾವನ ಮನೆಯಿಂದ ನೇರವಾಗಿ ಪೊಲೀಸ್​ ಠಾಣೆಗೆ ಹೋದೆ. ಆದರೆ, ನನ್ನನ್ನು ವಿಚಾರಣೆ ಮಾಡದೇ ಲಾಕಪ್​ನಲ್ಲಿ ಕೆಲ ಕಾಲ ಕೂರಿಸಿ ಹಿಂಸೆ ನೀಡಿದರು. ಸ್ವಲ್ಪ ಸಮಯದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು. ಆದರೆ, ಯಾವುದೇ ವಿಚಾರಣೆ ಮಾತ್ರ ಮಾಡಲಿಲ್ಲ. ಇದರಿಂದ ನಾನು ಬಹಳ ನೊಂದಿದ್ದೇನೆ. ನನ್ನನ್ನು ಏಕಾಏಕಿ ಲಾಕಪ್​ನಲ್ಲಿ ಹಾಕಿದ್ದಾರೆ. ಇದು ತುಂಬಾ ನೋವಾಗಿದೆ.

ಗೀತಾಂಜಲಿ ಅವರು ನನಗೆ 3 ತಿಂಗಳಿಂದ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ. ಯಾವ ದಾರಿಯಲ್ಲೂ ಕಂಡರೂ ಒದ್ದು ಒಳಗೆ ಹಾಕುತ್ತೇನೆ ಎಂದು ಬೆದರಿಸಿದ್ದಾರೆ. ಇದನ್ನು ನಾನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ಕೊರಗುತ್ತಿದ್ದೇನೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎರಡು ಪುಟಗಳ ಸುದೀರ್ಘ ಡೆತ್​ ನೋಟ್​ ಬರೆದಿರುವ ತಾಯಣ್ಣ ಕೊನೆಯಲ್ಲಿ ನನ್ನ ಎಲ್ಲ ಕುಟುಂಬ ಸದಸ್ಯರನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಇದೇ ನನ್ನ ಕೊನೆಯ ಬರಹ ನೋಡಿಕೊಳ್ಳಿ. ಮಿಸ್​ ಯು ಅಮ್ಮ ಎಂದು ಬರೆದಿದ್ದಾನೆ. (ದಿಗ್ವಿಜಯ ನ್ಯೂಸ್​)