ನವದೆಹಲಿ: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೋಮವಾರ ನೋಟಿಸ್ ನೀಡಲಾಗಿತ್ತು.
ಇನ್ನು ತಮಗೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಲೋಸಕಭೆ ಕಾರ್ಯದರ್ಶಿ ಮೋಹಿತ್ ರಾಜನ್ಗೆ ಪತ್ರ ಬರೆದಿರುವ ರಾಹುಲ್ ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ ನಾನು ಇಲ್ಲಿ ಕಳೆದ ಸಂತೋಷದ ಸಮಯ ಜನರ ಆದೇಶವಾಗಿತ್ತು. ನನ್ನ ಹಕ್ಕುಗಳಿಗೆ ಧಕ್ಕೆಯಾಗದಂತೆ ನಿಮ್ಮ ಪತ್ರದಲ್ಲಿ ತಿಳಿಸಿರುವ ವಿಚಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ರಾಹುಲ್ ಗಾಂಧಿ ಹಾಲಿ ಲುಟೆನ್ಸ್ ಪ್ರದೇಶದ ತುಘಲಕ್ ಲೇನ್ನಲ್ಲಿರುವ ನಂ 12 ಬಂಗಲೆಯಲ್ಲಿ ವಾಸವಿದ್ದಾರೆ. 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಬಗ್ಗೆ ವ್ಯಂಗ್ಯವಾಡಿದ್ದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಳೆದ ವಾರ ಸೂರತ್ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು.
ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿ ಲೋಕಸಭಾ ಕಾರ್ಯಾಲಯ ಆದೇಶ ಹೊರಡಿಸಿತ್ತು. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ತಿಂಗಳೊಳಗೆ ಅಧಿಕೃತ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡಬೇಕು ಎಂದು ಸೋಮವಾರ ನೋಟಿಸ್ ಜಾರಿ ಮಾಡಲಾಗಿತ್ತು.