ನ್ಯೂಸ್

ಬಸವ ತತ್ವದ ಆಧಾರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ; ರಾಹುಲ್ ಗಾಂಧಿ

ಮಂಡ್ಯ: ಭಾರತ್ ಜೋಡೋ ಯಾತ್ರೆಯ ಹಲವು ಭಾಷಣಗಳಲ್ಲಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸುತ್ತಾ ಬಂದಿರುವ ರಾಹುಲ್ ಗಾಂಧಿ, ಇದೀಗ ಬಸವ ತತ್ವದ ಆಧಾರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಬಸವಣ್ಣನ ನಾಡು ಜನರನ್ನು ಪ್ರೀತಿಸಲು ತಿಳಿಸುವುದರ ಜತೆಗೆ, ವಿಶ್ವಕ್ಕೆ ಶಾಂತಿಯನ್ನು ಕಲಿಸಿಕೊಟ್ಟಿದೆ. ಬಸವಣ್ಣನವರ ಮಾತಿನಂತೆ ನಾವು ನಡೆಯುತ್ತಿದ್ದೇವೆ ಎಂದು ಹೇಳಿದರು.

ಜನರ ಕಷ್ಟ ಕೆಳಲು ನಾವು ಹೆಜ್ಜೆ ಹಾಕುತ್ತಿದ್ದೇವೆ. ದ್ವೇಷ ಅಳಿಸಿ ಶಾಂತಿ ನೆಲೆಸುವುದು ನಮ್ಮ ಪಾದಯಾತ್ರೆಯ ಉದ್ದೇಶ. ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ರಾಗಿ ಖರೀದಿಸಲು ಸರ್ಕಾರ ಮುಂದೆ ಬರುತ್ತಿಲ್ಲ. ರೈತರು ಉಪಯೋಗಿಸುವ ಸಾಮಗ್ರಿ ಬೆಲೆ ಜಾಸ್ತಿಯಾಗಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಲೆ ಕಡಿಮೆ ಇತ್ತು. ಆದರೆ ಬಿಜೆಪಿ ಸರ್ಕಾರ ಬಂದಾಗ ಯಾಕೆ ಬೆಲೆ ಏರಿಕೆ ಆಗುತ್ತಿದೆ ಎಂದು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಬಿಝಿನೆಸ್​ ಮ್ಯಾನ್​ಗಳ ಪರವಾಗಿ ಬಿಜೆಪಿ ಸರ್ಕಾರ ಇದೆ. ಅತ್ಯಂತ ಶ್ರೀಮಂತ ವ್ಯಕ್ತಿ ಮೋದಿಗೆ ಆತ್ಮೀಯರಾಗಿದ್ದಾರೆ. ಅವರ ಬೆಂಬಲಕ್ಕೆ ಮೋದಿ‌ ನಿಂತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಆಧಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಶ್ರೀಮಠದಿಂದ ರಾಹುಲ್​ಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹಾರ ಹಾಕಿ ಬರಮಾಡಿಕೊಂಡರು. ರಾಹುಲ್ ಗಾಂಧಿ ಕಾಲಭೈರವೇಶ್ವರ ಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ರಣದೀಪ್ ಸಿಂಗ್ ಸುರ್ಜಾವಾಲ, ಸಿದ್ದರಾಮಯ್ಯ, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್​ ನೀಡಿದರು.