Rahul Gandhi : ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹಿಳೆಯರನ್ನು ಓಲೈಸುವ ಕಾಂಗ್ರೆಸ್ ಪ್ರಯತ್ನ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ 5 ಲಕ್ಷ ಮಹಿಳೆಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲು ಪಕ್ಷ ನಿರ್ಧರಿಸಿದೆ. ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ತಿಂಗಳಿಗೆ 2,500 ರೂ.ಗಳ ಜೊತೆಗೆ ಉಚಿತ ನ್ಯಾಪ್ಕಿನ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದ್ದು, ಉಚಿತ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್‌ಗಳ ಮೇಲೆ ರಾಹುಲ್ ಗಾಂಧಿ ಚಿತ್ರ ಮುದ್ರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಆಡಳಿತಾರೂಢ ಜೆಡಿಯು ಹಾಗೈ ಮೈತ್ರಿ ಪಕ್ಷ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಹಾರದ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಜಾಗೃತಿ ಮೂಡಿಸುವ ಗುರಿಯನ್ನು ಪಕ್ಷವು ಹೊಂದಿದ್ದು, ಪ್ರಿಯದರ್ಶಿನಿ ಉಡಾನ್ ಯೋಜನೆಯಡಿಯಲ್ಲಿ ಈ ಪ್ಯಾಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಉಪಕ್ರಮವು ರಾಜ್ಯದ ಮಹಿಳಾ ಮತದಾರರಿಗಾಗಿ ದೊಡ್ಡ ಅಭಿಯಾನದ ಭಾಗವಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಆದರೆ, ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಜೆಡಿಯು ಜರಿದಿದೆ.
ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ತಕ್ಷಣವೇ ಮೈ ಬಹಿನ್ ಸಮ್ಮಾನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಜೊತೆಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಉಚಿತವಾಗಿ ಒದಗಿಸಲು ಉದ್ದೇಶಿಸಿದ್ದೇವೆ ಎಂದು ಬಿಹಾರದ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಕುಮಾರ್ ಶುಕ್ರವಾರ ಹೇಳಿಕೆ ನೀಡಿದರು. ಇದೇ ಸಂದರ್ಭದಲ್ಲಿ ಉಚಿತ ಪ್ಯಾಡ್‌ಗಳನ್ನು ಹೊಂದಿರುವ ಪ್ಯಾಕೆಟ್ಗಳನ್ನು ಪ್ರದರ್ಶಿಸಿದರು.
5 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಇದರ ಉದ್ದೇಶ ಮುಟ್ಟಿನ ಆರೋಗ್ಯವನ್ನು ಪರಿಹರಿಸುವುದು, ಸಾಮಾಜಿಕ ನಿಷೇಧಗಳನ್ನು ಮುರಿಯುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಎಂದಿದೆ. ಆದರೆ, ಸ್ಯಾನಿಟರಿ ಪ್ಯಾಡ್ ಬಾಕ್ಸ್ಗಳಲ್ಲಿ ರಾಹುಲ್ ಗಾಂಧಿ ಅವರ ಫೋಟೋವನ್ನು ಮುದ್ರಿಸಿರುವುದು ಇದೀಗ ವಿವಾದಕ್ಕೆ ಗುರಿಯಾಗಿದೆ. ಇನ್ನು ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್‌ಗಳಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮುಖವೂ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಜೆಡಿಯು ಪಕ್ಷದ ವಕ್ತಾರ ನೀರಜ್ ಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ತಂತ್ರವನ್ನು ಕೇವಲ ಚುನಾವಣಾ ಗಿಮಿಕ್ ಎಂದಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಗೌರವದ ಸಂಕೇತ. ಇದೀಗ ಚುನಾವಣಾ ವರ್ಷ ಬಂದಿದೆ. ನೀವು ಅಧಿಕಾರದ ದುರಹಂಕಾರದ ಪ್ರದರ್ಶನದಲ್ಲಿ, ಅದರ ಮೇಲೆ ನಿಮ್ಮ ಮುಖವನ್ನು (ಸ್ಯಾನಿಟರಿ ಪ್ಯಾಡ್‌ಗಳು) ಚಿತ್ರಿಸುತ್ತೀರಿ ಎಂದು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ರಾಹುಲ್ ಗಾಂಧಿಯವರ ಚಿತ್ರವನ್ನು ಬಳಸಿದ್ದಕ್ಕಾಗಿ ನೀರಜ್ ಕುಮಾರ್ ಟೀಕಿಸಿದರು.
ಈ ನಡೆಯನ್ನು ರಾಜಕೀಯದಲ್ಲಿ ಸೈದ್ಧಾಂತಿಕ ದಿವಾಳಿತನ ಅಥವಾ ಬುದ್ಧಿಶಕ್ತಿಯ ಕೊರತೆ ಎಂದು ಕರೆಯಲಾಗುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರುವುದು ಅಥವಾ ಸ್ವಾಭಾವಿಕವಾಗಿ, ರಾಜಕೀಯ ದುಷ್ಕೃತ್ಯಗಳಿಗೆ ಹೆಸರುವಾಸಿಯಾದ ಆರ್‌ಜೆಡಿಯಂತಹ ಪಕ್ಷದೊಂದಿಗೆ ಇರುವುದರ ಪರಿಣಾಮವಿದು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ನೀರಜ್ ವಾಗ್ದಾಳಿ ನಡೆಸಿದರು.
ನಿರೀಕ್ಷಿತವಾಗಿಯೇ, ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಹಾರದಲ್ಲಿ ಮಹಿಳೆಯರಿಗಾಗಿ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕಾಂಗ್ರೆಸ್, ತನ್ನ ಸೈದ್ಧಾಂತಿಕ ದಿವಾಳಿತನವನ್ನು ಪ್ರದರ್ಶಿಸಿದೆ. ಅದರ ನಾಯಕ ರಾಹುಲ್ ಗಾಂಧಿ ಔಚಿತ್ಯದ ಕೊರತೆಯಿಂದ ಕುಖ್ಯಾತರಾಗಿದ್ದಾರೆ. ಆದರೆ, ಈ ಗುಣವು ಅವರ ಪಕ್ಷವನ್ನು ಬಾಧಿಸುತ್ತಿದೆ. ಈ ಪಕ್ಷದಲ್ಲಿ ಸೊಕ್ಕು ಸರ್ವೋಚ್ಚವಾಗಿದೆ ಎಂದು ಬಿಜೆಪಿ ವಕ್ತಾರ ಕುಂತಲ್ ಕೃಷ್ಣ ಕಿಡಿಕಾರಿದ್ದಾರೆ.
ಜೆಡಿಯು ಹಾಗೂ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ, ಈ ಆಧುನಿಕ ಯುಗದಲ್ಲಿ, ರಾಹುಲ್ ಗಾಂಧಿಯವರ ಫೋಟೋಗಳು ಪ್ಯಾಕೆಟ್‌ಗಳ ಮೇಲೆ ಏಕೆ ಇವೆ ಎಂಬುದು ಪ್ರಶ್ನೆಯಲ್ಲ. ಬಿಹಾರದ ನಮ್ಮ ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಬಟ್ಟೆಯ ತುಂಡುಗಳನ್ನು ಬಳಸಲು ಮತ್ತು ಅನಾರೋಗ್ಯ ಒಳಗಾಗಲು ಏಕೆ ಒತ್ತಾಯಿಸಲ್ಪಡುತ್ತಾರೆ ಎಂಬುದು ಪ್ರಶ್ನೆ. ಬಿಜೆಪಿ ಯಾವಾಗಲೂ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದಿದ್ದಾರೆ. (ಏಜೆನ್ಸೀಸ್)