ಬೆಂಗಳೂರು: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಾಯಿ ಸೋನಿಯಾ ಗಾಂಧಿ ಅವರ ಜತೆ ನಾಗರಹೊಳೆ ಅಭಯಾರಣ್ಯಕ್ಕೆ ಹೋಗಿದ್ದಾರೆ. ವಿಶೇಷವೆಂದರೆ, ಈ ಅಮ್ಮ-ಮಗ ಇನ್ನೊಂದು ತಾಯಿ-ಮಗುವಿನ ಸಂಕಷ್ಟಕ್ಕೆ ಮರುಗಿದ್ದಾರೆ.
ಅಭಯಾರಣ್ಯದಲ್ಲಿ ಆನೆಯೊಂದು ಗಾಯಗೊಂಡಿರುವ ತನ್ನ ಮರಿಯಾನೆಯ ಸ್ಥಿತಿಗೆ ಮರುಗುತ್ತಿರುವುದನ್ನು ನೋಡಿ ಸ್ಪಂದಿಸಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಮೇಲೆ ತಿಳಿಸಲಾದ ಆನೆಮರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ ನಾನು ರಾಜಕೀಯ ಗಡಿಯನ್ನು ದಾಟಿ ಈ ಆನೆಮರಿಗೆ ಅನುಕಂಪದ ಮೇರೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಕೋರಿಕೊಳ್ಳುತ್ತಿದ್ದೇನೆ. ಸೂಕ್ತ ಚಿಕಿತ್ಸೆ ಸಿಕ್ಕರೆ ಈ ಆನೆಮರಿ ಬದುಕುಳಿಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನೀವು ಅದಕ್ಕೆ ಚಿಕಿತ್ಸೆ ಕೊಡಿಸುವಿರಿ ಎಂದು ಆಶಿಸಿದ್ದೇನೆ ಎಂಬುದಾಗಿ ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.