ನ್ಯೂಸ್

ರಾಹುಲ್​ ಗಾಂಧಿ ಸ್ವಚ್​ ಟ್ವಿಟ್ಟರ್​ ಅಭಿಯಾನ! ಪಕ್ಷದ ನಾಯಕರು, ಪತ್ರಕರ್ತರು ಸೇರಿ 50 ಮಂದಿಯನ್ನು ಅನ್​ಫಾಲೋ..

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಮತ್ತೊಮ್ಮೆ ಟ್ವಿಟ್ಟರ್​ನಲ್ಲಿ ಭಾರೀ ಸುದ್ದಿ ಮಾಡಲಾರಂಭಿಸಿದ್ದಾರೆ. ಒಂದೇ ದಿನ ರಾಹುಲ್​ ಗಾಂಧಿ ಸುಮಾರು 50 ಮಂದಿಯನ್ನು ಟ್ವಿಟ್ಟರ್​ನಲ್ಲಿ ಅನ್​ಫಾಲೋ ಮಾಡಿದ್ದು, ಇದರ ಕುರಿತಾಗಿ ಚರ್ಚೆ ಆರಂಭವಾಗಿದೆ.

ಮಂಗಳವಾರದಂದು ರಾಹುಲ್​ ಗಾಂಧಿ ಅವರ ಟ್ವಿಟ್ಟರ್​ ಖಾತೆಯಿಂದ ತಮ್ಮದೇ ಪಕ್ಷದ ಕೆಲ ನಾಯಕರು, ಸಾಮಾಜಿಕ ಮಾಧ್ಯಮಗಳ ಪ್ರಭಾವಿಗಳು, ಪತ್ರಕರ್ತರೂ ಸೇರಿ ಒಟ್ಟು ದುಮಾರು 50 ಮಂದಿಯನ್ನು ಅನ್​ಫಾಲೋ ಮಾಡಲಾಗಿದೆ. ವಿಶೇಷವೆಂದರೆ ಅವರದೇ ಕ್ಷೇತ್ರವಾದ ವಯ್​ನಾಡಿನ ಸಂಸದರ ಕಚೇರಿಯಲ್ಲಿ ಕೆಲಸ ಮಾಡುವ ಕೆಲ ಅಧಿಕಾರಿಗಳ ಖಾತೆಯನ್ನೂ ರಾಹುಲ್​ ಅನ್​ಫಾಲೋ ಮಾಡಿದ್ದಾರೆ ಎನ್ನಲಾಗಿದೆ. 18.8 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ರಾಹುಲ್​ ಅವರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇದೀಗ ರಾಹುಲ್​ 220 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.

ರಾಹುಲ್​ ಅವರ ಈ ನಡೆಗೆ ಕಾಂಗ್ರೆಸ್​ ಸ್ಪಷ್ಟನೆ ನೀಡುವ ಪ್ರಯತ್ನವನ್ನೂ ಮಾಡಿದೆ. ಇದೀಗ ಅವರು ಫಾಲೋ ಮಾಡಬೇಕಾಗಿರುವ ಜನರ ಹೊಸ ಪಟ್ಟಿ ಸಿದ್ಧವಾಗುತ್ತಿದೆ. ಅದಾದ ನಂತರ ಅವರನ್ನು ಫಾಲೋ ಲಿಸ್ಟ್​ಗೆ ಸೇರಿಸಲಾಗುವುದು. ಈಗ ಅನ್​ಫಾಲೋ ಆಗಿರುವ ಕೆಲವರೂ ಆ ಪಟ್ಟಿಯಲ್ಲಿ ಮತ್ತೆ ಸೇರಿಕೊಳ್ಳಬಹುದು ಎಂದು ತಿಳಿಸಿದೆ. ಅದಾಗ್ಯೂ ಈ ಬಗ್ಗೆ ಅನೇಕರು ಅನೇಕ ಮಾತುಗಳನ್ನು ಆಡಿಕೊಳ್ಳುವುದು ಮಾತ್ರ ನಿಲ್ಲಿಸಿಲ್ಲ. (ಏಜೆನ್ಸೀಸ್​)