ರಾಹುಲ್​ ಗಾಂಧಿ 
ನ್ಯೂಸ್

ನಾಳೆ ಸೂರತ್​ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣದ ತೀರ್ಪನ್ನು ಪ್ರಶ್ನಿಸಲಿರುವ ರಾಹುಲ್​ ಗಾಂಧಿ

ನವದೆಹಲಿ: 2019ರ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹಲ್​ ಗಾಂಧಿ ಅವರನ್ನು ದೋಷಿ ಎಂದು ಸೂರತ್​ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿ 2 ವರ್ಷ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಲೋಕಸಭಾ ಸದಸ್ಯತ್ವದಿಂದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ತಮ್ಮ ವಿರುದ್ಧ ಅಪರಾಧ ಮತ್ತು ಶಿಕ್ಷೆಯನ್ನು ರಾಹುಲ್​ ಗಾಂಧಿ ಅವರು ಸೂರತ್​ ನ್ಯಾಯಾಲಯದಲ್ಲಿ ನಾಳೆ ಪ್ರಶ್ನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಮನವಿಯಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಸೆಷನ್ಸ್ ನ್ಯಾಯಾಲಯವನ್ನು ಕೋರಿದ್ದಾರೆ ಮತ್ತು ಪ್ರಕರಣ ಇತ್ಯರ್ಥವಾಗುವವರೆಗೆ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆಯೂ ಅವರು ಕೋರಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಲಾಗಿದೆ ಮತ್ತು ಅವರ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿ ಇಡಲಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಬೆನ್ನಲ್ಲೇ ಲೋಕಸಭೆಯ ಸಚಿವಾಲಯವು, ರಾಹುಲ್​ ಅವರ ಲೋಕಸಭಾ ಸದಸ್ಯತ್ವವನ್ನು ಅಮಾನತುಗೊಳಿಸಿದ್ದು, ಇದನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ.

ರಾಹುಲ್​ ಅವರ ಶಿಕ್ಷೆಯನ್ನು ಉಚ್ಚ ನ್ಯಾಯಾಲಯವು ತಡೆಹಿಡಿಯದೇ ಹೋದರೆ, ಚುನಾವಣಾ ಆಯೋಗವು ವಯನಾಡು ಲೋಕಸಭಾ ಸ್ಥಾನಕ್ಕೆ ವಿಶೇಷ ಚುನಾವಣೆಯನ್ನು ಘೋಷಿಸುತ್ತದೆ. ಅಲ್ಲದೆ, ಮುಂದಿನ ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ರಾಹುಲ್​ ಅವರಿಗೆ ಅವಕಾಶ ನೀಡುವುದಿಲ್ಲ.

ಏನಿದು ಪ್ರಕರಣ?

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್​, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.

ರಾಹುಲ್​ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ, ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್​ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್​ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ. (ಏಜೆನ್ಸೀಸ್​)