ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಮೂರನೇ ದಿನದ ವಿಚಾರಣೆ ಎದುರಿಸಲು ಇಂದು ಬೆಳಗ್ಗೆ 11.50ರ ಸುಮಾರಿಗೆ ದೆಹಲಿಯಲ್ಲಿರುವ ಇ.ಡಿ. ಹೆಡ್ ಕ್ವಾರ್ಟರ್ಸ್ಗೆ ಆಗಮಿಸಿದರು.
ಇಡಿ ಕಚೇರಿಗೆ ರಾಹುಲ್ ಆಗಮಿಸುವ ಮುನ್ನ ದೆಹಲಿಯ ಕಾಂಗ್ರೆಸ್ ಕಚೇರಿಯ ಮುಂದೆ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಹೈಡ್ರಾಮ ನಡೆಯಿತು. ಕೆಲವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಕಳೆದ ಎರಡು ದಿನಗಳಿಂದಲೂ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ರಾಹುಲ್ ಗಾಂಧಿ ಈಗಾಗಲೇ ಎರಡು ದಿನಗಳ ಕಾಲ ಸುಮಾರು 20 ಗಂಟೆ ವಿಚಾರಣೆ ಎದುರಿಸಿದ್ದಾರೆ. ನಿನ್ನೆ ಬೆಳಗ್ಗೆ 11.05ಕ್ಕೆ ಸಹೋದರಿ ಪ್ರಿಯಾಂಕಾ ಗಾಂಧಿ ಜತೆ ಇಡಿ ಕಚೇರಿಗೆ ಆಗಮಿಸಿದ ರಾಹುಲ್ ಗಾಂಧಿ, ರಾತ್ರಿ 9.30ರವರೆಗೂ ವಿಚಾರಣೆ ಎದುರಿಸಿದರು. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಸುಮಾರು 11.30ರ ಸಮಯದಲ್ಲಿ ರಾಹುಲ್ ಗಾಂಧಿ ಇಡಿ ಕಚೇರಿಯಿಂದ ಹೊರಬಂದರು. ಮೂಲಗಳ ಪ್ರಕಾರ ರಾಹುಲ್ ಅವರಿಗೆ ಇಡಿ ಸುಮಾರು 20 ಪ್ರಶ್ನೆಗಳನ್ನು ಕೇಳಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ಇಡಿ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿಯಲಿದೆ. ಎಲ್ಲಿಯವರೆಗೆ ಇಡಿ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತದೆಯೋ ಅಲ್ಲಿಯವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದ್ದಾರೆ.
ಜೂ.19ರಂದು ರಾಹುಲ್ ಗಾಂಧಿಯ 52ನೇ ಜನ್ಮದಿನಾಚರಣೆ ಇರಲಿದ್ದು, ಹುಟ್ಟಿದ ಹಬ್ಬದ ಸಂಭ್ರಮವನ್ನೂ ಇ.ಡಿ. ಮಸಕು ಮಾಡುವುದೇ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡತೊಡಗಿದೆ. ಅಲ್ಲದೆ, ಕಾಂಗ್ರೆಸ್ ಪ್ರತಿಭಟನೆಯು ಮುಂದುವರಿದಿದೆ. (ಏಜೆನ್ಸೀಸ್)