Rahul Gandhi slams PM: ನವದೆಹಲಿಯಲ್ಲಿ ನಡೆದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೊಸ್ಟ್ ಹಂಚಿಕೊಂಡಿರುವ ರಾಹುಲ್, ಪತ್ರಕರ್ತೆಯರನ್ನು ಹೊರಗಿಡಲು ಅವಕಾಶ ನೀಡುವ ಮೂಲಕ ಪ್ರಧಾನಿ ತಮ್ಮ ದೌರ್ಬಲ್ಯವನ್ನು ಪ್ರದರ್ಶಿಸಿದ್ದಾರೆ, ನೀವು ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ಅನುಮತಿ ನೀಡಿದಾಗ, ಅದು ಭಾರತದ ಪ್ರತಿಯೊಬ್ಬ ಮಹಿಳೆಗೆ ಅವರ ಪರವಾಗಿ ನಿಲ್ಲಲು ತಾವು ತುಂಬಾ ದುರ್ಬಲರು ಎಂದು ಹೇಳಿದಂತಾಗುತ್ತದೆ, ಈ ವಿಷಯದಲ್ಲಿ ಪ್ರಧಾನಿಯವರ ಮೌನ, ನಾರಿ ಶಕ್ತಿ ಘೋಷಣೆಯ ಪೊಳ್ಳುತನವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು. ನಮ್ಮ ದೇಶದಲ್ಲಿ, ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾಗವಹಿಸುವ ಸಮಾನ ಹಕ್ಕಿದೆ, ನಿನ್ನೆ ನಡೆದ ತಾರತಮ್ಯದ ನಡುವೆಯೂ ನಿಮ್ಮ ಮೌನ ತಮ್ಮ ಸರ್ಕಾರದ ಘೋಷಣೆಗಳ ಶೂನ್ಯತೆಯನ್ನು ಜಗಜ್ಜಾಹೀರುಗೊಳಿಸಿದೆ ಎಂದರು.
ಇದೇ ವಿಷಯವಾಗಿ ಪ್ರಧಾನಿಗಳ ನಿಲುವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರಶ್ನಿಸಿರುವ ಪ್ರಿಯಾಂಕಾ, ಪ್ರಧಾನಿ ಮೋದಿ ಮಹಿಳಾ ಹಕ್ಕುಗಳನ್ನು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಲಾಭದ ಉದ್ದೇಶದಿಂದ ಮಾತ್ರ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದರು. ತಾಲಿಬಾನ್ ಪ್ರತಿನಿಧಿಯ ಭಾರತ ಭೇಟಿಯ ಸಮಯದಲ್ಲಿ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡುವ ಬಗ್ಗೆ ತಮ್ಮ ನಿಲುವು ಏನು ಎನ್ನುವುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು, ಮಹಿಳಾ ಹಕ್ಕುಗಳ ಮಾನ್ಯತೆಯನ್ನು ಚುನಾವಣೆಯ ಲಾಭದ ಉದ್ದೇಶದಿಂದ ನೋಡುವುದಾದರೆ, ಅದು ಭಾರತದ ಸಮರ್ಥ ಮಹಿಳೆಯರಿಗೆ ಮಾಡಿದ ಅವಮಾನವಾಗುತ್ತದೆ, ಈ ಅವಮಾನವನ್ನು ನಮ್ಮ ದೇಶದಲ್ಲಿ ಅನುಮತಿಸಸಿರುವುದು ಹೇಗೆ..? ಎಂದರು.
ಭಾರತ ಸರ್ಕಾರದ ಮೂಗಿನ ಕೆಳಗೆ ಇಂತಹ ತಾರತಮ್ಯವನ್ನು ಹೇಗೆ ಅನುಮತಿಸಲಾಗಿದೆ ಎಂದು ಪತ್ರಕರ್ತೆ ನಯನಿಮಾ ಬಸು ಪ್ರಶ್ನಿಸಿದರು. ಪ್ರಾತಿನಿಧ್ಯಕ್ಕೆ ಇಂತಹ ಅತಿರೇಕದ ನಿರ್ಲಕ್ಷ್ಯವನ್ನು ಅನುಮೋದಿಸಿದರು ಯಾರು..? ಎಂದು ಪ್ರಶ್ನಿಸಿದರು. ದಿ ಹಿಂದೂ ಪತ್ರಿಕೆಯ ರಾಜತಾಂತ್ರಿಕ ಸಂಪಾದಕಿ ಸುಹಾಸಿನಿ ಹೈದರ್, ಸರ್ಕಾರವು ತಾಲಿಬಾನ್‌ಗೆ ಮಹಿಳೆಯರ ವಿರುದ್ಧದ ಅಸಹ್ಯಕರ ಮತ್ತು ಕಾನೂನುಬಾಹಿರ ತಾರತಮ್ಯವನ್ನು ಭಾರತಕ್ಕೆ ತರಲು ಅವಕಾಶ ನೀಡಿದೆ ಎಂದು ಟೀಕಿಸಿದರು.
ದೇವಬಂದಿ ಇಸ್ಲಾಂನ ತೀವ್ರ ಸಂಪ್ರದಾಯವಾದಿ ವ್ಯಾಖ್ಯಾನವನ್ನು ಅನುಸರಿಸುವ ತಾಲಿಬಾನ್, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ತನ್ನ ಕಠಿಣ ವರ್ತನೆಗಾಗಿ ಅಂತರರಾಷ್ಟ್ರೀಯ ಟೀಕೆಗಳನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿದೆ. ಆಗಸ್ಟ್ 2021 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಆಡಳಿತವು ಆರನೇ ತರಗತಿಗಿಂತ ಹೆಚ್ಚಿನ ಹುಡುಗಿಯರ ಶಿಕ್ಷಣವನ್ನು ನಿಷೇಧಿಸಿದೆ, ಹೆಚ್ಚಿನ ಉದ್ಯೋಗಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಿದೆ ಮತ್ತು NGOಗಳು ಅಫಘಾನ್ ಮಹಿಳೆಯರನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ.(ಏಜೆನ್ಸೀಸ್)