ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇನಾ ಸಿಬ್ಬಂದಿಯ ಜಾತಿ ಮತ್ತು ಧರ್ಮವನ್ನು ತಿಳಿದುಕೊಳ್ಳಬೇಕೆಂದು ಹೇಳಿದ್ದಕ್ಕೆ ನಾಚಿಕೆಪಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಗುರುವಾರ (ನ.6) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬಿಹಾರದ ಚುನಾವಣಾ ಱಲಿಯಲ್ಲಿ ಮಾತನಾಡಿದ ಷಾ, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಉದ್ಯೋಗಗಳನ್ನು ಕದಿಯುತ್ತಿದ್ದಾರೆ ಮತ್ತು ಭದ್ರತಾ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯು ರಾಜ್ಯವನ್ನು ನುಸುಳುಕೋರರಿಂದ ಮುಕ್ತಗೊಳಿಸುವ ಬಗ್ಗೆ ಎಂದಿದ್ದಾರೆ.
ನಮ್ಮ ಸೇನಾ ಸಿಬ್ಬಂದಿಯ ಜಾತಿ ಮತ್ತು ಧರ್ಮವನ್ನು ತಿಳಿದುಕೊಳ್ಳುವ ಬಗ್ಗೆ ಮಾತನಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ನಾಚಿಕೆಯಾಗಬೇಕು. ನಮ್ಮ ಸೇನೆಯಲ್ಲಿ ಯಾವುದೇ ಸೈನಿಕನ ವಿರುದ್ಧ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ ಎಂದು ರಾಹುಲ್ ವಿರುದ್ಧ ಷಾ ಕಿಡಿಕಾರಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆಡಳಿತದ ಅವಧಿಯಲ್ಲಿ ಕೊಲೆ, ಹತ್ಯಾಕಾಂಡ ಮತ್ತು ಅತ್ಯಾಚಾರ ಸಾಮಾನ್ಯವಾಗಿತ್ತು. ಅದರೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದಲ್ಲಿ ಯಾವುದೇ ಬಲಿಷ್ಠ ವ್ಯಕ್ತಿಗೆ ಸ್ಥಾನವಿಲ್ಲ ಎಂದು ಷಾ ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮಖಾನಾ ಮಂಡಳಿಯನ್ನು ರಚಿಸಿದರು. ಲಾಲು ಮತ್ತು ಅವರ ಕಂಪನಿ ಅಧಿಕಾರಕ್ಕೆ ಬಂದರೆ, ಒಳನುಸುಳುಕೋರ ಮಂಡಳಿಯನ್ನು ರಚಿಸುತ್ತಾರೆ ಎಂದು ಗೃಹ ಸಚಿವರು ಟೀಕಾಪ್ರಹಾರ ಮಾಡಿದ್ದಾರೆ.
ಬಿಹಾರದಲ್ಲಿ ಜಂಗಲ್ ರಾಜ್ ಮರಳುವುದನ್ನು ತಡೆಯಲು ನರೇಂದ್ರ ಮೋದಿ -ನಿತೀಶ್ ಕುಮಾರ್ ಜೋಡಿಗೆ ಮಾತ್ರ ಸಾಧ್ಯವಾಗುತ್ತದೆ. ಲಾಲು ಪ್ರಸಾದ್ ಯಾದವ್ ಮತ್ತು ರಾಹುಲ್ ಗಾಂಧಿ ರಾಜ್ಯದಲ್ಲಿ ನುಸುಳುಕೋರರಿಗೆ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಮಹಾಮೈತ್ರಿಕೂಟವನ್ನು ಗುರಿಯಾಗಿಟ್ಟುಕೊಂಡು, "ಈ ಗುಂಡುಬಂಧನ್ ಅಧಿಕಾರಕ್ಕೆ ಬಂದರೆ, ಚಂಪಾರಣ್ ಮಿನಿ ಚಂಬಲ್ ಆಗಿ ಬದಲಾಗುತ್ತದೆ. ಬಿಹಾರ ಇಂದಿರಾ ಗಾಂಧಿಯವರ ಭ್ರಷ್ಟಾಚಾರದ ವಿರುದ್ಧ ಹೋರಾಡಿತು ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸಿತು. ಆದರೆ ಈಗ ಕಾಂಗ್ರೆಸ್ ಆರ್‌ಜೆಡಿಯ ಸಹಾಯದಿಂದ ರಾಜ್ಯವನ್ನು ಆಳಲು ಪ್ರಯತ್ನಿಸುತ್ತಿದೆ ಎಂದು ಷಾ ಕಿಡಿಕಾರಿದ್ದಾರೆ. (ಏಜೆನ್ಸೀಸ್)