Rahul Gandhi: ಕೇರಳದ ಮಲಯಾಳಂ ಸುದ್ದಿ ಚಾನಲ್ವೊಂದರ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ವಕ್ತಾರ ಪಿಂಟು ಮಹಾದೇವನ್ ಅವರು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದು, ಎದೆಗೆ ಗುಂಡು ಹೊಡೆಯುತ್ತೇವೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರ ಬರೆದಿದ್ದು, ಬಿಜೆಪಿ ವಕ್ತಾರ ಪಿಂಟು ಮಹಾದೇವ್ ವಿರುದ್ದ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಅದನ್ನು ಲೋಕಸಭೆ ವಿರೋಧ ಪಕ್ಷದ ನಾಯಕನ ವಿರುದ್ಧದ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ ಎಂದು ನಿರ್ಣಯಿಸಲಾಗುತ್ತದೆ. ಇದು ನೀವು ಗೃಹಸಚಿವರಾಗಿ ತೆಗದುಕೊಂಡ ಪ್ರಮಾಣವಚನದ ಉಲ್ಲಂಘನೆ ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ರಾಜಕೀಯ ಕ್ಷೇತ್ರದಲ್ಲಿನ ಭಿನ್ನಾಭಿಪ್ರಾಯಗಳನ್ನು ರಾಜಕೀಯವಾಗಿ, ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ, ಬಿಜೆಪಿ ನಾಯಕರು ನೇರ ಟಿವಿಯಲ್ಲಿ ತಮ್ಮ ರಾಜಕೀಯ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಖಂಡಿತವಾಗಿಯೂ, ಆರೆಸ್ಸೆಸ್-ಬಿಜೆಪಿ ಸಿದ್ಧಾಂತದ ವಿರುದ್ಧ ರಾಹುಲ್ ಗಾಂಧಿ ಅವರ ತೀವ್ರ ಹೋರಾಟ ಅವರನ್ನು ಕೆರಳಿಸಿದೆ ಎಂದಿದ್ದಾರೆ.
ಈ ಕೊಲೆ ಬೆದರಿಕೆಯೂ ನಾಲಿಗೆಯ ಎಡವಟ್ಟಿನಿಂದ ಆದದ್ದಲ್ಲ, ಅಥವಾ ಅಸಡ್ಡೆಯಿಂದ ಕೂಡಿದ ಅತಿಶಯೋಕ್ತಿಯೂ ಅಲ್ಲ. ಇದು ವಿರೋಧ ಪಕ್ಷದ ನಾಯಕ ಮತ್ತು ಭಾರತದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರ ವಿರುದ್ಧದ ತಣ್ಣನೆಯ, ಲೆಕ್ಕಾಚಾರದ ಮತ್ತು ತಣ್ಣಗಾಗಿಸುವ ಮಾರಣಾಂತಿಕ ಬೆದರಿಕೆ ಎಂದು ಕರೆದಿದ್ದಾರೆ.
ಆಡಳಿತ ಪಕ್ಷದ ಅಧಿಕೃತ ವಕ್ತಾರರು ಇಂತಹ ವಿಷಕಾರಿ ಮಾತುಗಳನ್ನು ಆಡಿರುವುದು ರಾಹುಲ್ ಗಾಂಧಿಯವರ ಜೀವಕ್ಕೆ ತಕ್ಷಣದ ಅಪಾಯ ತಂದೊಡ್ಡುವುದಲ್ಲದೆ, ಸಂವಿಧಾನ, ಕಾನೂನಿನ ನಿಯಮ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ನೀಡಬೇಕಾದ ಮೂಲಭೂತ ಭದ್ರತಾ ಭರವಸೆಗಳನ್ನು ದುರ್ಬಲಗೊಳಿಸುತ್ತದೆ. ಈಗಾಗಲೇ ರಾಹುಲ್ ಗಾಂಧಿಯವರ ಭದ್ರತೆಯನ್ನು ವಹಿಸಿಕೊಂಡಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅವರ ಸುರಕ್ಷತೆಗೆ ಬೆದರಿಕೆ ಇರುವ ಬಗ್ಗೆ ಹಲವು ಪತ್ರಗಳನ್ನು ಬರೆದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)